

ರಜನಿಕಾಂತ್ ಭಾರತೀಯ ಸಿನಿಮಾರಂಗದ ಸೂಪರ್ಸ್ಟಾರ್. ವಯಸ್ಸು 60ರ ಮೇಲಾದರೂ ಡಾನ್ಸ್ಗೂ ಸೈ, ಆ್ಯಕ್ಷನ್ ಸನ್ನಿವೇಶಗಳಿಗೂ ಜೈ. ಖಡಕ್ ಡೈಲಾಗ್ ಡೆಲಿವರಿಯಲ್ಲೂ ರಜನಿಗೆ ರಜನಿನೇ ಸಾಟಿ. ಬಹುತೇಕ ಅಂದಿನ ಮತ್ತು ಇಂದಿನ ಎಲ್ಲ ನಟಿಯರು ರಜನಿ ಜತೆ ಆನ್ಸ್ಕ್ರೀನ್ ರೊಮ್ಯಾನ್ಸ್ ಮಾಡಿದ್ದಾರೆ. ಇಂಥ ಲೆಜೆಂಡರಿ ನಟ ಬೆಂಗಳೂರಿನಲ್ಲಿ ದಶಕದ ಹಿಂದೆ ರೋಬೋಟ್ ಸಿನಿಮಾ ಒಪ್ಪಿಕೊಂಡ ಬಳಿಕ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ಘಟನೆ ರಜನಿ ಅವರಿಗೇ ನಗು ತರಿಸಿತ್ತಂತೆ. ಅದನ್ನು ಅಷ್ಟೇ ರೋಚಕವಾಗಿ ಹೇಳಿಕೊಂಡಿದ್ದಾರೆ.
'ಆವತ್ತು ನಾನು ಬೆಂಗಳೂರಿನ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆಯಲ್ಲಿಯೇ ನನ್ನನ್ನು ಇಷ್ಟಪಡುವ ಅಭಿಮಾನಿಯೊಬ್ಬರಿದ್ದರು. ಅವರ ಹೆಸರು ನಂದು ಲಾಲ್. ಅವರ ವಯಸ್ಸು 60ಪ್ಲಸ್. 'ಮತ್ತೇನು ರಜನಿ ತಲೆಮೇಲಿನ ಕೂದಲೆಲ್ಲ ಉದುರಿವೆ. ಏನಾಯ್ತು?' ಅದಕ್ಕೆ ಉತ್ತರಿಸಿದ ರಜನಿ, 'ಬಹಳ ಹೋಗಿದ್ಯಾ? ಹೋಗ್ಲಿ ಬೀಡು' ಎಂದರು. ಅಷ್ಟಕ್ಕೆ ಸುಮ್ಮನಾಗದ ನಂದುಲಾಲ್, 'ನಿವೃತ್ತಿ ಜೀವನ ಹೇಗಿದೆ?' ಎಂದಾಗ, 'ಇಲ್ಲ ನಾನು ಸಿನಿಮಾ ಮಾಡುತ್ತಿದ್ದೇನೆ. ಐಶ್ವರ್ಯಾ ರೈ ಆ ಸಿನಿಮಾದಲ್ಲಿ ನಾಯಕಿ' ಎಂದರು ರಜನಿ.
ಅದಕ್ಕೆ ನಂದುಲಾಲ್ ಪ್ರತಿಕ್ರಿಯಿಸಿ, 'ಏನು ಐಶ್ವರ್ಯಾನಾ? ತುಂಬ ಮುದ್ದಾದ ನಟಿ. ಅಂದಹಾಗೆ, ಆ ಚಿತ್ರದಲ್ಲಿ ಹೀರೋ ಯಾರು?' ಎಂದರು. ಆಗ ರಜನಿ 'ನಾನೇ..' ಎಂದಾಗ, ಬರೋಬ್ಬರಿ 10 ನಿಮಿಷ ನಂದು ಲಾಲ್ ಬಾಯಿಂದ ಮಾತೇ ಹೊರಡಲಿಲ್ಲವಂತೆ. ಅಲ್ಲಿಂದ ಹೊರನಡೆದ ನಂದುಲಾಲ್, ಬೇರೆಯವರ ಜತೆ ಮಾತನಾಡುವುದನ್ನು ರಜನಿ ಕೇಳಿಸಿಕೊಂಡರು. 'ಐಶ್ವರ್ಯಾ ರೈಗೆ ಏನಾಗಿದೆ? ಅಭಿಷೇಕ ಬಚ್ಚನ್ ಸರೀ ಇದಾರಾ? ಹೋಗ್ಲಿ ಅಮಿತಾಬ್ ಸಾಬ್ ಅವರಿಗಾದರೂ ಏನಾಗಿದೆ? ರಜನಿಗೆ ಐಶ್ವರ್ಯಾ ಜೋಡಿನಾ?' ಎಂದಿದ್ದರಂತೆ ನಂದುಲಾಲ್. ಕೊನೆಗೆ ರೋಬೋಟ್ ಸಿನಿಮಾ ಸೂಪರ್ ಹಿಟ್ ಆಗಿದ್ದು ಇಡೀ ಭಾರತೀಯರಿಗೆ ಗೊತ್ತು. ಸಿನಿಮಾ ಬಿಡುಗಡೆ ಆಗಿ ಹಿಟ್ ಆದಮೇಲೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಐಶ್ವರ್ಯಾ ಬಳಿ ಹೇಳಿಕೊಂಡಿದ್ದರು ತಲೈವಾ….