

ಮುಂಬೈ: ನಟಿ ಎರಿಕಾ ಫರ್ನಾಂಡೀಸ್(Erica Fernandes).. ಹೆಸರು ಕೇಳಿ ಯಾರಿರಬಹದು ಎಂದು ಆಲೋಚಿಸುತ್ತಿದ್ದೀರಾ. ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜತೆಗೆ ಜೋಡಿಯಾಗಿ ನಿನ್ನಿಂದಲೇ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ. ಬಣ್ಣದ ಜಗತ್ತಿನಲ್ಲಿ ನಿರೀಕ್ಷಿಸಿದಷ್ಟು ನಟಿಗೆ ಸಕ್ಸಸ್ ಒಲಿದು ಬರಲಿಲ್ಲ. ಸದ್ಯ ನಟಿ ಎರಿಕಾ ಫರ್ನಾಂಡೀಸ್ ಬಾಲಿವುಡ್ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ನೀಡಿದ ಪಾಡಕಾಸ್ಟ್ ಸಂದರ್ಶನವೊಂದರಲ್ಲಿ ನಟಿ ಎರಿಕಾ ಬಾಲಿವುಡ್ ಜಗತ್ತಿನಲ್ಲಿ ಮೇಲೆಲ್ಲಾ ಥಳುಕ ಒಳಗೆ ಇರುವುದೆಲ್ಲಾ ಹುಳುಕು ಎಂದಿದ್ದಾರೆ. ಬಾಲಿವುಡ್ನಲ್ಲಿ ಕೊಡು-ಕೊಳ್ಳು ವ್ಯವಹಾರ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ಲೈಂಗಿಕ ಸವಲತ್ತುಗಳನ್ನು ಒದಗಿಸಿದರೆ ಮಾತ್ರವೇ ಅಲ್ಲಿ ಸಿನಿಮಾ ಅವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ.
ನಾನು ಕೇಳಿರುವಂತೆ ಬಾಲಿವುಡ್ನಲ್ಲಿ ಕೆಲವು ವಾಟ್ಸ್ಆಫ್ ಗ್ರೂಫ್ಗಳಿವೆ. ಆ ಗ್ರೂಪ್ಗಳಲ್ಲಿ ಅವರು ತಾವು ಯಾರು ಯಾರೊಂದಿಗೆ ಲೈಂಗಿಕತೆ ಹೊಂದಿದ್ದೇವೆ, ಯಾರೊಂದಿಗೆ ಸಂಬಂಧ ಹೊಂದಬೇಕು? ಯಾರು ಇದಕ್ಕೆಲ್ಲಾ ಸುಲಭವಾಗಿ ಒಪ್ಪುತ್ತಾರೆ ಮತ್ತು ಯಾರು ಒಪ್ಪುವುದಿಲ್ಲ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಎರಿಕಾ ಅವರ ಈ ಹೇಳಿಕೆ ಸದ್ಯ ಬಾಲಿವುಡ್ನಲ್ಲಿ ಬಾರಿ ಚರ್ಚೆಗಳನ್ನು ಹುಟ್ಟುಹಾಕಿವೆ. ಕಿರುತೆರೆಯಿಂದ ಸಿನಿಮಾಗೆ ಬಂದ ನಟಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿದ್ದಾಗೆ ಮತ್ತೆ ಕಿರುತೆರೆ ಕಡೆ ಮುಖ ಮಾಡಿದರು. ನಿನ್ನಿಂದಲೇ ಸಿನಿಮಾ ಜತೆಗೆ ಕನ್ನಡದಲ್ಲಿ 2015ರಲ್ಲಿ ಬಿಡುಗಡೆಯಾದ ಬುಗುರಿ ಸಿನಿಮಾದಲ್ಲಿ ಎರಿಕಾ ಫರ್ನಾಂಡೀಸ್ ಅವರನ್ನು ನೋಡಬಹುದು. 2017ರ ಬಳಿಕ ಸಿನಿಮಾ ಅವಕಾಶಗಳು ಬರುವುದೇ ನಿಂತು ಹೋದ ಕಾರಣ ಮತ್ತೆ ಕಿರುತರೆಗೆ ಎಂಟ್ರಿ ಕೊಟ್ಟರು. ಚಿತ್ರರಂಗದಲ್ಲಿ ರಾಜಕೀಯಕ್ಕೆ ಬೇಸತ್ತು ನಟಿ ಮುಂಬೈನಿಂದ ದುಬೈಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)