

ಕನ್ನಡದ ‘ಅಪ್ನಾ ದೇಶ್’ ಸೇರಿ 30ಕ್ಕೂ ಹೆಚ್ಚು ಹಿಂದಿ, ತೆಲುಗು, ತಮಿಳು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಅಂಜಲಿ ಪಾಟೀಲ್‌ಗೆ ಸಲ್ಲುತ್ತದೆ. 2013ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ ‘ನಾ ಬಂಗಾರು ತಲ್ಲಿ’ ಚಿತ್ರದಲ್ಲಿ ಅವರ ನಟನೆಗೆ ಆಂಧ್ರ ಪ್ರದೇಶ ಸರ್ಕಾರದ ಅತ್ಯುತ್ತಮ ನಟಿ ನಂದಿ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಯಲ್ಲಿ ವಿಶೇಷ ಉಲ್ಲೇಖ ಮಾಡಲಾಗಿತ್ತು. ಇಂತಹ ಅಂಜಲಿ ಇತ್ತೀಚೆಗಷ್ಟೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಕಳೆದ ಡಿ. 28ರಂದು ಕೊರಿಯರ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ ದೀಪಕ್ ಶರ್ಮಾ ಎಂಬಾತ, ನಟಿಯ ಹೆಸರಿನಲ್ಲಿ ತೈವಾನ್‌ಗೆ ಕಳುಹಿಸಿರುವ ಪಾರ್ಸಲ್‌ನಲ್ಲಿ ಮಾದಕ ವಸ್ತುಗಳಿರುವುದಾಗಿ ತಿಳಿಸಿದ್ದಾನೆ. ಜತೆಗೆ ಮುಂಬೈ ಸೈಬರ್ ಪೊಲೀಸರೊಂದಿಗೆ ಈ ಕುರಿತು ಮಾತನಾಡಲು ಹೇಳಿದ್ದಾನೆ. ಅದಾದ ಕೆಲ ಹೊತ್ತಿನಲ್ಲೇ ಮುಂಬೈ ಸೈಬರ್ ಕ್ರೈಮ್ ಪೊಲೀಸ್ ಎಂದು ಹೇಳಿಕೊಂಡು ಅಂಜಲಿಗೆ ಕರೆ ಮಾಡಿ, ‘ನಿಮ್ಮ ಆಧಾರ್ ಸಂಖ್ಯೆ ಮೂರು ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿದ್ದು, ಅದರಿಂದ ಅಕ್ರಮ ಹಣ ವರ್ಗಾವಣೆಯಾಗಿದ್ದು, ಎ್ಐಆರ್ ದಾಖಲಾಗಿದೆ. ಹೀಗಾಗಿ ಪ್ರಕರಣದಿಂದ ನಿಮ್ಮ ಹೆಸರು ಕೈಬಿಡಲು ಹಣ ಕೊಡಿ’ ಎಂದು ಎರಡು ಹಂತಗಳಲ್ಲಿ 5.79 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾನೆ.
ಹಣ ಕಳುಹಿಸಿದ ಬಳಿಕ ಅಂಜಲಿ ಪಾಟೀಲ್ ತಮ್ಮ ಸ್ನೇಹಿತರ ಬಳಿ ಈ ಬಗ್ಗೆ ಹೇಳಿಕೊಂಡಿದ್ದು, ಆ ನಂತರ ಇದೊಂದು ವಂಚನೆಯ ಜಾಲ ಎಂಬುದು ತಿಳಿದುಬಂದಿದೆ. ಹೀಗಾಗಿ ಡಿ. 29ರಂದು ಅಂಜಲಿ ಪಾಟೀಲ್ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.