

Actor Suriya: ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯಿಸಿದ ಸೂಪರ್ ಡೂಪರ್ ಹಿಟ್ ಚಿತ್ರವೊಂದು ಇದೀಗ ಮತ್ತೆ ಚಿತ್ರಮಂದಿಗಳತ್ತ ಮುಖ ಮಾಡಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ.
ಸಿಮ್ರಾನ್, ಸಮೀರಾ ರೆಡ್ಡಿ ಮತ್ತು ರಮ್ಯಾ ಜತೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಸೂರ್ಯ ನಟಿಸಿದ 'ಸೂರ್ಯ ಸನ್ ಆಫ್ ಕೃಷ್ಣನ್' ಚಿತ್ರವು ಫೆ.14 ಪ್ರೇಮಿಗಳ ದಿನದಂದೇ ರೀ-ರಿಲೀಸ್ ಆಗುತ್ತಿರುವುದು ಫ್ಯಾನ್ಸ್ಗಳಲ್ಲಿ ಖುಷಿ ತಂದಿದೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರವನ್ನು ತಮಿಳಿನಲ್ಲಿ 'ವಾರಣಮ್ ಐಯಾರಂ' ಎಂದು ಬಿಡುಗಡೆ ಮಾಡಲಾಯಿತು. ಈ ಚಿತ್ರವನ್ನು 'ಸೂರ್ಯ ಸನ್ ಆಫ್ ಕೃಷ್ಣನ್' ಎಂದು ಡಬ್ ಮಾಡಿ ತೆಲುಗಿನಲ್ಲಿ ಬಿಡುಗಡೆಗೊಳಿಸಲಾಯಿತು.
ನವೆಂಬರ್ 14, 2008ರಂದು ಬಿಡುಗಡೆಯಾದ ಈ ಚಿತ್ರವು ತಮಿಳಿಗಿಂತ ತೆಲುಗಿನಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿತು. ಅದಾದ ಬಳಿಕ ಒಂದು ಬಾರಿ ಮರುಬಿಡುಗಡೆ ಆಗಿತ್ತು. ಇದೀಗ ಪ್ರೇಮಿಗಳ ದಿನದಂದು ಮತ್ತೊಮ್ಮೆ ತೆಲುಗಿನಲ್ಲಿ ರೀ-ರಿಲೀಸ್ ಮಾಡುತ್ತಿರುವುದು ಫ್ಯಾನ್ಸ್ಗಳಿಗೆ ಖುಷಿ ನೀಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಲ್‌ಎನ್ ಮೀಡಿಯಾ ಪ್ರೊಡಕ್ಷನ್ ಹೌಸ್ ಮುಖ್ಯಸ್ಥ, "ಸೂರ್ಯ ಅವರ 'ಸೂರ್ಯ ಸನ್ ಆಫ್ ಕೃಷ್ಣನ್' ಚಿತ್ರವನ್ನು ಪ್ರೇಮಿಗಳ ದಿನದಂದು ಮರು ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಚಿತ್ರದಲ್ಲಿ ಸೂರ್ಯ ತಮ್ಮ ಅತ್ಯುತ್ತಮ ಅಭಿನಯದಿಂದ ಎಲ್ಲರ ಗಮನಸೆಳೆದಿದ್ದರು" ಎಂದರು.
"ಫೆ.14ರಂದು ಎರಡು ತೆಲುಗು ರಾಜ್ಯಗಳ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಬಿಡುಗಡೆಯಾಗಲಿದೆ. ಈ ಎರಡು ರಾಜ್ಯಗಳ ಜತೆಗೆ, ನಾವು ತೆಲುಗು ಆವೃತ್ತಿಯನ್ನು ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ರೀ-ರಿಲೀಸ್ ಮಾಡಲು ನಿರ್ಧರಿಸಿದ್ದೇವೆ. ಇಂತಹ ಸೂಪರ್ ಡೂಪರ್ ಹಿಟ್ ಚಿತ್ರವನ್ನು ಬಿಡುಗಡೆ ಮಾಡುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ" ಎಂದು ಹೇಳಿದರು,(ಏಜೆನ್ಸೀಸ್).