

ಬೆಂಗಳೂರು: ನಟ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಹಳ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಪ್ರಕಾಶ್ ರಾಜ್ ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.
ಸುದೀಪ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವಿಚಾರ ದೇಶಾದ್ಯಂತ ಸುದ್ದಿಯಾಗಿದೆ. ಇಂದು ಮಧ್ಯಾಹ್ನ ನಡೆಸುವ ಸುದ್ದಿಗೋಷ್ಠಿಯಲ್ಲಿ ಎಲ್ಲ ಪ್ರಶ್ನೆಗೂ ಉತ್ತರ ಸಿಗಲಿದೆ. ಆದರೆ, ಈಗಾಗಲೇ ಅಭಿಮಾನಿಗಳು ಟ್ವಿಟರ್ನಲ್ಲಿ ಅಭಿಯಾನ ಶುರು ಮಾಡಿದ್ದು, ರಾಜಕೀಯ ಪ್ರವೇಶ ಮಾಡದಂತೆ ಸುದೀಪ್ ಅವರನ್ನು ಕೇಳಿಕೊಳ್ಳುತ್ತಿದ್ದಾರೆ.
ನಮಗೆ ರಾಜಕೀಯ ಬೇಡ. ನೀವು ಸಿನಿಮಾದಲ್ಲಿ ಇದ್ದುಕೊಂಡೇ ನಮಗೆ ಮನರಂಜನೆ ನೀಡಿದರೆ ಸಾಕು. ನಿಮ್ಮನ್ನು ಎಲ್ಲಾ ವರ್ಗದ ಜನರು ಗೌರವಿಸುತ್ತಾರೆ. ರಾಜಕೀಯಕ್ಕೆ ಸೇರಿ ನಿಮ್ಮ ಹೆಸರು ಮತ್ತು ಗೌರವವನ್ನು ಹಾಳುಮಾಡಿಕೊಳ್ಳಬೇಡಿ. ಈಗ ಯಾವ ರೀತಿ ಸಿನಿಮಾದಲ್ಲಿ ಇದ್ದುಕೊಂಡೇ ಅಳಿಲು ಸೇವೆ ಮಾಡುತ್ತಿದ್ದೀರೋ ಅದನ್ನೇ ಮುಂದುವರಿಸಿ. ರಾಜಕೀಯಕ್ಕೆ ಸೇರಿ ಅಭಿಮಾನಿಗಳ ಮನಸ್ಸನ್ನು ನೋಯಿಸಬೇಡಿ ಎಂದು ಮನವಿ ಮಾಡಿದ್ದಾರೆ.