More

    ಬೊಮ್ಮಾಯಿ ಇತಿಹಾಸ ಸೃಷ್ಟಿ?: 1985ರಲ್ಲಿ ಹೆಗಡೆ ಬಳಿಕ ಯಾವುದೇ ಪಕ್ಷ ಸತತ ಅಧಿಕಾರಕ್ಕೇರಿಲ್ಲ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಇತಿಹಾಸ ಸೃಷ್ಟಿಸುವರೇ? ರಾಜ್ಯದ ರಾಜಕೀಯ ವಲಯದಲ್ಲಿ ಈ ಸದ್ಯಕ್ಕೆ ಕೇಳಿಬರುತ್ತಿರುವ ಪ್ರಶ್ನೆ ಇದಾಗಿದೆ.

    ರಾಜ್ಯದಲ್ಲಿ ಕಳೆದ 38 ವರ್ಷಗಳ ಅವಧಿಯಲ್ಲಿ ನಡೆದಿರುವ ಏಳು ಚುನಾವಣೆಗಳಲ್ಲಿ ಆಡಳಿತದಲ್ಲಿದ್ದ ಪಕ್ಷ ಮತ್ತೊಮ್ಮೆ ಬಹುಮತ ಗಳಿಸಿ ಅಧಿಕಾರ ಹಿಡಿದ ಉದಾಹರಣೆ ಇಲ್ಲ. ರಾಮಕೃಷ್ಣ ಹೆಗಡೆ ಮಾತ್ರ 1985ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದರು. ಆ ನಂತರ ಅವಕಾಶ ಯಾರಿಗೂ ಸಿಕ್ಕಿಲ್ಲ. ಈ ಬಾರಿ ಮತ್ತೆ ಅಧಿಕಾರ ಹಿಡಿಯುವ ಬಗ್ಗೆ ಅತ್ಯಂತ ಹೆಚ್ಚಿನ ವಿಶ್ವಾಸದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಂದ ಇತಿಹಾಸ ಸೃಷ್ಟಿ ಸಾಧ್ಯವೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

    ರಾಜ್ಯದಲ್ಲಿ 1990ರಿಂದ ಕಾಂಗ್ರೆಸ್, ಬಿಜೆಪಿ, ಜನತಾದಳ ಪಕ್ಷಗಳು ಪ್ರಬಲವಾಗಿವೆ. ರಾಜ್ಯದಲ್ಲಿ ಏಕ ಪಕ್ಷದ ಆಡಳಿತ ಹಾಗೂ ಸಮ್ಮಿಶ್ರ ಸರ್ಕಾರ ಎರಡನ್ನು ಜನ ನೋಡಿದ್ದಾರೆ. ಆದರೂ ಅಧಿಕಾರದಲ್ಲಿದ್ದ ಪಕ್ಷವನ್ನು ಮಾತ್ರ ಮತ್ತೊಂದು ಅವಧಿಗೆ ಆಯ್ಕೆ ಮಾಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಮತಗಳ ಗಳಿಕೆಯ ಆಧಾರದಲ್ಲಿ ಸೀಟುಗಳ ಗಳಿಕೆ ಆಗುವುದಿಲ್ಲ ಎಂಬುದು ರಾಜ್ಯದಲ್ಲಿ ಉದ್ದಕ್ಕೂ ಕಂಡು ಬಂದಿದೆ. ಏಕೆಂದರೆ ಪಕ್ಷಗಳ ಪರವಾದ ಮತಬ್ಯಾಂಕ್ ರಾಜ್ಯದಲ್ಲಿ ಚದುರಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಮತಗಳಿಕೆ ಪ್ರಮಾಣ ಹೆಚ್ಚಾಗಿದ್ದರೂ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿತ್ತು.

    ಪರಿಣಾಮಕಾರಿ ಆಡಳಿತಕ್ಕೂ ಸಿಕ್ಕಿಲ್ಲ: ಆಡಳಿತ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಿ ಮುಖ್ಯಮಂತ್ರಿಗಳ ಬದಲಾವಣೆ ಆಗಿರುವುದು ಒಂದೆಡೆಯಾದರೆ, ಪರಿಣಾಮಕಾರಿಯಾಗಿ ಆಡಳಿತ ಮಾಡಿದ ಪಕ್ಷ ಸಹ ಜನರ ಒಲವು ಮತ್ತೊಮ್ಮೆ ಗಳಿಸುವಲ್ಲಿ ವಿಫಲವಾಗಿರುವುದು ರಾಜ್ಯದ ವಿಶೇಷವಾಗಿದೆ. ರಾಜ್ಯದ ಮತದಾರರ ನಾಡಿಮಿಡಿತವನ್ನು ಹಿಡಿಯಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದೆ. ರಾಜ್ಯದ ಮತದಾರರನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲವೆಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿಯ ಆಡಳಿತ ಪರವಾದ ಹಾಗೂ ಪ್ರತಿಪಕ್ಷಗಳ ಆಡಳಿತ ವಿರೋಧವಾದ ವಾದವನ್ನು ಮತದಾರರು ಹೇಗೆ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಲೆಕ್ಕ ಹಾಕಲು ರಾಜಕೀಯ ಪಕ್ಷಗಳು ತಿಣುಕಾಡುತ್ತಿವೆ. ಮತದಾರರ ನಿರ್ಧಾರ ಯಾವಾಗಲೂ ಗುಪ್ತಗಾಮಿನಿಯೇ ಆಗಿರುತ್ತದೆ.

    ಆಡಳಿತ ಪರ ವಿಶ್ವಾಸವೇಕೆ?

    • ಕರೊನಾ ನಿಯಂತ್ರಣ
    • ಆಡಳಿತ ಸ್ಥಿತಿ ಉತ್ತಮ ಪಡಿಸಿರುವುದು
    • ಬಜೆಟ್​ನಲ್ಲಿ ಎಲ್ಲ ವರ್ಗಗಳಿಗೆ ಸಮಾನ ಆದ್ಯತೆ
    • ಮೀಸಲಾತಿ ಮರು ವರ್ಗೀಕರಣದ ಮೂಲಕ ಸಾಮಾಜಿಕ ನ್ಯಾಯ
    • ಎಲ್ಲ ವಲಯಗಳಲ್ಲಿ ಉತ್ತಮ ಅಭಿವೃದ್ಧಿ ಸಾಧನೆ

    ವಿರೋಧಿ ಅಲೆ ಹೇಗೆ?

    • ಭರವಸೆಗಳನ್ನು ಅನುಷ್ಠಾನಗೊಳಿಸದಿರುವುದು
    • ಅನರ್ಹರು, ಯೋಜನೆ ಗಳ ಪಡೆಯಲು ಸಾಧ್ಯವಾಗ ದವರು ಆಡಳಿತ ಪಕ್ಷದ ವಿರುದ್ಧ ತಿರುಗಿ ಬೀಳುವುದು
    • ಪ್ರತಿಸ್ಪರ್ಧಿಗಳಿಂದ ಸರ್ಕಾರದ ವಿರುದ್ಧ ನಿರಂತರ ಪ್ರಚಾರ

    ರಾಜ್ಯದ ಇತಿಹಾಸ

    • 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷ 93 ಸ್ಥಾನಗಳಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತು
    • 1985ರಲ್ಲಿ ರಾಮಕೃಷ್ಣ ಹೆಗಡೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಿ 139 ಸ್ಥಾನಗಳಿಸಿದರು. ಆಂತರಿಕ ಕಚ್ಚಾಟ ಹೆಚ್ಚಾಗಿತ್ತು.
    • 1989ರಲ್ಲಿ ಕಾಂಗ್ರೆಸ್ 178 ಸ್ಥಾನಗಳಿಸಿತು. ಆದರೆ ಮೂವರು ಮುಖ್ಯಮಂತ್ರಿಗಳಾದರು.
    • 1994ರಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದ ಜನತಾದಳ 115 ಸ್ಥಾನಗಳಿಸಿತು. ಗೌಡರು ಪ್ರಧಾನಿಯಾದ ನಂತರ ಪಕ್ಷ ವಿಭಜನೆಯಾಯಿತು.
    • 1999ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ 132 ಸ್ಥಾನಗಳಿಸಿತು.
    • 2004ರಲ್ಲಿ ಯಾವುದೇ ಪಕ್ಷಕ್ಕೆ ಬಹು ಮತವಿಲ್ಲ. ಕಾಂಗ್ರೆಸ್-ಜೆಡಿಎಸ್ ಹಾಗೂ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರಗಳು ಆಡಳಿತ ಮಾಡಿದವು
    • 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 110 ಸ್ಥಾನಗಳಿಸಿ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು. ನಂತರ ಆಪರೇಷನ್ ಕಮಲ ನಡೆಸಿತು.
    • 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ 122 ಸ್ಥಾನಗಳಿಸಿತು.
    • 2018ರಲ್ಲಿ ಮತ್ತೆ ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ 108 ಸ್ಥಾನಗಳಿಸಿತು. ಆರಂಭದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮಾಡಿದವು. ಆಪರೇಷನ್ ಕಮಲದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅವರನ್ನು ಇಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಲಾಯಿತು.

     

     

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts