

ಶಿವಮೊಗ್ಗ: ಕನ್ನಡದ ಸೃಷ್ಟಿಯಾಗಿದ್ದು ತಮಿಳಿನಿಂದ ಎಂದು ಉದ್ಧಟತನದ ಹೇಳಿಕ ನೀಡಿರುವ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರ್ನಾಟಕ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಿವಪ್ಪನಾಯಕ ವೃತ್ತದಲ್ಲಿ ಕಮಲ್ ಹಾಸನ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ವೇದಿಕೆಯ ಅಧ್ಯಕ್ಷ ವಾಟಾಳ್ ಮಂಜುನಾಥ್ ಮಾತನಾಡಿ, ಕನ್ನಡಿಗರು ಕಮಲ್ಹಾಸನ್ ಚಿತ್ರಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಅವರು ನೀಡಿರುವ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕನ್ನಡ ಸೃಷ್ಟಿಯಾಗಿದ್ದು ತಮಿಳಿನಿಂದ ಎನ್ನುವ ಮೂಲಕ ಕಮಲ್ ಹಾಸನ್ ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ. ಅವರು ಕನ್ನಡಿಗರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.
ವೇದಿಕೆ ಕಾರ್ಯಕರ್ತರಾದ ಅರ್ಚನಾ, ದೀಪಾ, ರವಿಕುಮಾರ್, ಲೋಕೇಶ್, ಸಂತೋಷ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.