ನಂದಿಕೂರು ರೈಲ್ವೆ ಮೇಲ್ಸೇತುವೆ ದುರಸ್ತಿಗೆ ಕ್ರಮ

pdb (3)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾರ್ಕಳ- ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿರುವ ತೀರಾ ಹದಗೆಟ್ಟ ನಂದಿಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರೈಲ್ವೇ ಇಲಾಖೆ ನಿರಾಕ್ಷೇಪಣಾ ಪತ್ರ ನೀಡುವುದರ ಜತೆಗೆ ಲೋಕೋಪಯೋಗಿ ಇಲಾಖೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಂದಿಕೂರು ರೈಲ್ವೇ ಮೇಲ್ಸೆತುವೆ ಹದಗೆಟ್ಟಿದ್ದು ದುರಸ್ತಿಗೊಳಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧಿಕಾರಿಗಳ ಜತೆಗೆ ರೈಲು ನಿಲ್ದಾಣ ಮತ್ತು ಹೆದ್ದಾರಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ತಕ್ಷಣವೇ ಸೇತುವೆ ಇಕ್ಕೆಲಗಳಲ್ಲಿ ನಿಂತ ನೀರು ಸೂಕ್ತವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುಬೇಕು. ಮಳೆ ಕಡಿಮೆಯಾದ ಕೂಡಲೇ ರಸ್ತೆ ದುರಸ್ತಿ ಆರಂಭಿಸಬೇಕು ಎಂದು ಸಂಸದರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್‌ಗೆ ಸೂಚಿಸಿದರು. ಅಂದಾಜು ಪಟ್ಟಿ: ರಾಜ್ಯ ಹೆದ್ದಾರಿಯಿಂದ ಆನಡ್ಕ ಮೂಲಕ ರೈಲ್ವೇ ನಿಲ್ದಾಣಕ್ಕೆ ಸಂಪರ್ಕ ರಸ್ತೆ ನಿರ್ಮಿಸುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಅಲ್ಲಿ ಭೂಸ್ವಾಧೀನವೂ ನಡೆದಿದೆ. ಆದರೂ ರೈಲ್ವೆ ಇಲಾಖೆ ರಸ್ತೆ ನಿರ್ಮಾಣದತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಇಂಜಿನಿಯರ್ ವಿಜಯ್‌ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು, ಶೀಘ್ರವೇ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಸೂಚಿಸಿದರು. ಗಿಡಗಂಟಿಗಳ ತೆರವಿಗೆ ಆಗ್ರಹ: ಈಗ ಸುತ್ತಿ ಬಳಸಿ ಪಲಿಮಾರಿಗಾಗಿ ರೈಲ್ವೇ ನಿಲ್ದಾಣಕ್ಕೆ ತೆರಳಬೇಕಾಗಿದ್ದು, ಅಪೂರ್ಣಗೊಂಡಿರುವ ಈ ರಸ್ತೆಯಲ್ಲಿ ಗಿಡಗಂಟಿಗಳು ಬೆಳೆದು ಸಂಚಾರಿಸಲು ಅಸಾಧ್ಯವಾಗಿದೆ. ಗಿಡಗಂಟಿ ತೆರವು ಮಾಡಲು ಗ್ರಾಪಂ ಹಾಗೂ ಸ್ಥಳೀಯರಿಗೆ ರೈಲ್ವೇ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಗೆ ಬೀದಿದೀಪ ಅಳವಡಿಸುವಂತೆ ಶಾಸಕ ಗುರ್ಮೆ ತಾಕೀತು ಮಾಡಿದರು. ಪಲಿಮಾರು ಕಾಲೇಜು ಬಳಿಯಿರುವ ಲೆವೆಲ್ ಕ್ರಾಸಿಂಗ್ ಸಂಪರ್ಕ ರಸ್ತೆಯ ಕಾಮಗಾರಿ ನಡೆಸಲು ಸ್ಥಳೀಯಾಡಳಿತಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ನಂದಿಕೂರು ರೈಲ್ವೆ ಮೇಲ್ಸೇತುವೆ ಹದಗೆಟ್ಟಿರುವ ಬಗ್ಗೆ ‘ವಿಜಯವಾಣಿ’ ನಿರಂತರವಾಗಿ ವರದಿ ಮಾಡಿ ಗಮನ ಸೆಳೆದಿತ್ತು. ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಸತೀಶ್ ದೇವಾಡಿಗ, ಪ್ರವೀಣ್ ಕುಮಾರ್, ರಶ್ಮಿ ಸನ್ನೋಣಿ, ಮಹೇಶ್ ಶೆಟ್ಟಿ, ಯೋಗಾನಂದ, ಶಶಿಕಾಂತ್ ಪಡುಬಿದ್ರಿ, ಲಕ್ಷ್ಮಣ್ ಶೆಟ್ಟಿವಾಲ್, ದಿನೇಶ್ ಪಲಿಮಾರು, ಪಿಡಬ್ಲ್ಯುಡಿ ಇಂಜಿನಿಯರ್ ಮನೋಜ್, ಕೊಂಕಣ ರೈಲ್ವೆಯ ವೆಂಕಟೇಶ್, ಸ್ಥಳೀಯರಾದ ಸತೀಶ್ ಶೆಟ್ಡಿ ಬೆಜ್ಜಬೆಟ್ಟು, ಪ್ರತೀಕ್ ಕೋಟ್ಯಾನ್, ಸಂದೀಪ್ ಪಲಿಮಾರು, ರಾಮ ಪೂಜಾರಿ, ಕೃಷ್ಣಕುಮಾರ್ ಶೆಟ್ಟಿ, ಸತೀಶ್ ಶೆಟ್ಟಿ, ರವಿ ಶೆಟ್ಟಿ, ಉಮೇಶ್ ಉಪಸ್ಥಿತರಿದ್ದರು.

ಸರ್ವಿಸ್ ರಸ್ತೆಗಳ ಪರಿಶೀಲನೆ

ಕೊಂಕಣ ರೈಲ್ವೇ ಮಾರ್ಗ ಹಾದು ಹೋಗಿರುವ ಮೇಲ್ಸೇತುವೆ ಮತ್ತು ಲೆವೆಲ್ ಕ್ರಾಸಿಂಗ್ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ನಿರಾಕ್ಷೇಪಣಾ ಪತ್ರ ನೀಡದಿರುವ ಬಗ್ಗೆ ಸಂಸದರ ಗಮನ ಸೆಳೆಯಲಾಯಿತು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಮೂಡಬೆಟ್ಟು ಪ್ರದೇಶದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಶಾಸಕ ಗುರ್ಮೆ ರೈಲ್ವೆ ಇಂಜಿನಿಯರ್‌ನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net