ಹಕ್ಕುಪತ್ರ ವಿತರಿಸಲು ಕ್ರಮ ಅಗತ್ಯ

09gan7
Published on

ಕುಂದಾಪುರ: ದಲಿತ ಮಹಿಳೆಗೆ ಹಕ್ಕುಪತ್ರ ನೀಡಲು ವಿಳಂಬ, ವಲಸೆ ಕಾರ್ಮಿಕರನ್ನು ತೆರವುಗೊಳಿಸಿರುವುದು, ನೆಹರು ಮೈದಾನ ಹಸ್ತಾಂತರ ವಿವಾದ, ಸರ್ವಿಸ್ ರಸ್ತೆಗಳ ಸಮಸ್ಯೆ, ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಪಾರ್ಕಿಂಗ್ ಸಮಸ್ಯೆ ಮೊದಲಾದ ವಿಚಾರಗಳು ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಟಿ.ಟಿ. ರಸ್ತೆಯ ಪ್ರೇಮಾ ಎಂಬುವರಿಗೆ ಹಕ್ಕುಪತ್ರ ನೀಡಲು ಆಗುತ್ತಿರುವ ವಿಳಂಬದ ಬಗ್ಗೆ ಸದಸ್ಯೆ ವೀಣಾ ಭಾಸ್ಕರ್ ಸಭೆಯಲ್ಲಿ ಪ್ರಸ್ತಾಪಿಸಿದರು. ಪ್ರೇಮಾ ಅವರಿಗೆ ಹಕ್ಕುಪತ್ರ ನೀಡಲು ಅಧ್ಯಕ್ಷರು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ದಲಿತರಿಗೆ ಈ ರೀತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು, ಪುರಸಭೆ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡು ಒಂದು ತಿಂಗಳೊಳಗೆ ಅವರಿಗೆ ಹಕ್ಕುಪತ್ರ ವಿತರಿಸಬೇಕು, ಇಲ್ಲವಾದಲ್ಲಿ ಹಕ್ಕುಪತ್ರ ವಂಚಿತ ಕುಟುಂಬದೊಂದಿಗೆ ಪುರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ವೀಣಾ ಭಾಸ್ಕರ್ ಎಚ್ಚರಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಆನಂದ ಜೆ., ಹಕ್ಕುಪತ್ರ ವಿತರಣೆ ಸಂಬಂಧ ಸರ್ಕಾರ ಕಮಿಟಿ ರಚನೆ ಮಾಡಿಲ್ಲ. ಜಾಗ ಗುರುತಿಸುವ ಕಾರ್ಯ ಮುಗಿದಿದೆ ಎಂದರು. ಕಂದಾಯ ಶಾಖೆಯ ಒಬ್ಬರನ್ನು ಈ ಕಾರ್ಯಕ್ಕೆ ಮೀಸಲಿಟ್ಟು, ಸರ್ವೇ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಾಧಿಕಾರಿ ಸೂಚಿಸಿದರು.

ಕೌನ್ಸಿಲ್ ನಿರ್ಣಯಕ್ಕೆ ಬೆಲೆ ಇಲ್ಲವೇ?:

ಶಾಸ್ತ್ರಿ ವೃತ್ತದ ಫ್ಲೈ ಓವರ್ ಕೆಳಗೆ ಮಲಗುತ್ತಿದ್ದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರವುಗೊಳಿಸಿರುವುದನ್ನು ಪ್ರಸ್ತಾಪಿಸಿದ ಸದಸ್ಯ ಗಿರೀಶ್, ಕಳೆದ 2-3 ಸಭೆಗಳಲ್ಲಿ ಈ ಬಗ್ಗೆ ಚರ್ಚೆ ಆಗಿ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ನಿರ್ಣಯ ಕೈಗೊಂಡಿದ್ದರೂ ಅಧಿಕಾರಿಗಳು ಇದನ್ನು ಅನುಷ್ಠಾನಗೊಳಿಸಿಲ್ಲ. ಸದ್ಯ ಮುಖ್ಯಮಂತ್ರಿ, ಸಚಿವರು, ಡಿಸಿ ಹೇಳಿದ್ದಾರೆ ಎಂದು ಕ್ರಮಕೈಗೊಳ್ಳುವುದಾದರೆ ಕೌನ್ಸಿಲ್ ಯಾಕೆ? ಕೌನ್ಸಿಲ್ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕೌನ್ಸಿಲ್ ನಿರ್ಣಯವನ್ನು ನಿರ್ಲಕ್ಷಿಸುವುದಾದರೆ ಕೌನ್ಸಿಲ್ ಸಭೆಯಲ್ಲಿ ಇಂತಹ ವಿಚಾರಗಳನ್ನು ಚರ್ಚೆ ಮಾಡುವ ಅವಶ್ಯಕತೆ ಇದೆಯೇ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.

ವಲಸೆ ಕಾರ್ಮಿಕರ ಅಸಭ್ಯ ವರ್ತನೆ, ಜನರಿಗೆ ತೊಂದರೆಯಾಗುತ್ತಿರುವುದು ನಿಜ, ಆದರೆ ಪುನರ್ವಸತಿ ಕಲ್ಪಿಸದೆ ತೆರವುಗೊಳಿಸಿರುವುದು ಜನಾಕ್ರೋಶಕ್ಕೆ ನಾಂದಿ ಹಾಡಿದೆ. ತೆರವುಗೊಳಿಸುವ ಮುನ್ನ ಅವರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿತ್ತು. ಆದಷ್ಟು ಶೀಘ್ರ ವಲಸೆ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಆಗ್ರಹಿಸಿದರು.

ನಗರದ ನೆಹರು ಮೈದಾನವನ್ನು ಅಧಿಕೃತವಾಗಿ ಪುರಸಭೆಗೆ ಹಸ್ತಾಂತರಿಸಲು ಅವಕಾಶ ಇದೆಯೇ ಇಲ್ಲವೊ ಎಂಬುದನ್ನು ಲಿಖಿತ ರೂಪದಲ್ಲಿ ಪಡೆದುಕೊಳ್ಳಬೇಕು ಎಂದು ಸದಸ್ಯ ಗರೀಶ್ ಆಗ್ರಹಿಸಿದರು.

ಹಂಪ್‌ಗಳಿಗೆ ಬಣ್ಣ ಹಾಕಿ

ಅನೇಕ ತಿಂಗಳ ಬಳಿಕ ಪುರಸಭೆ ರಸ್ತೆಯಲ್ಲಿ ಹಂಪ್ ಹಾಕಲಾಗಿದೆ. ಕೆಲವು ಹಂಪ್‌ಗಳ ಎತ್ತರ ತುಂಬಾ ಹೆಚ್ಚಾಗಿದ್ದು ರಿಕ್ಷಾ, ಕಾರು, ಬೈಕ್‌ಗಳಿಗೆ ತೊಂದರೆಯಾಗುತ್ತಿದೆ. ಹಂಪ್‌ಗಳಿಗೆ ಬಣ್ಣ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದರು. ಪುರಸಭೆ ವ್ಯಾಪ್ತಿಯ ಕೆಲವು ಕಾಂಕ್ರೀಟ್ ರಸ್ತೆಗಳಲ್ಲಿ ಹೊಂಡಗಳನ್ನು ಮುಚ್ಚುವಂತೆ ಸದಸ್ಯ ಶ್ರೀಧರ ಶೇರುಗಾರ್ ಆಗ್ರಹಿಸಿದರು. ಫೆರಿ ರಸ್ತೆಯ ಬಿಇಒ ಕಚೇರಿ ಮೇಲಿರುವ ಮರದ ಗೆಲ್ಲುಗಳನ್ನು ಕಡಿಯುವಂತೆ ಸದಸ್ಯ ಅಬು ಮೊಹಮ್ಮದ್ ಹೇಳಿದರು. ಕೋಡಿ ಭಾಗದಲ್ಲಿ ಕಳೆದ ಮಳೆಗಾಲದಲ್ಲಿ ಐದು ಮನೆಗಳಿಗೆ ನೀರು ನುಗ್ಗಿದ್ದು, ಆದಷ್ಟು ಶೀಘ್ರ ಚರಂಡಿಯನ್ನು ಸ್ವಚ್ಛಗೊಳಿಸಬೇಕೆಂದು ಸದಸ್ಯ ಅಶ್ಫಕ್ ಒತ್ತಾಯಿಸಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಮುಖ್ಯಾಧಿಕಾರಿ ಆನಂದ್ ಜೆ. ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ

ನಗರದ ಪೌಲ್ ಹ್ಯಾರಿಸ್/ಪಾರಿಜಾತ ಸರ್ಕಲ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಆಕ್ಷೇಪಣೆ ಬಂದಿದೆ ಎಂದು ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು. ಪಾರಿಜಾತ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಆಗಿದೆ. ಆದ್ದರಿಂದ ಅದೇ ಸ್ಥಳದಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ಹೇಳಿದರು. ನಗರದ ಪೌಲ್ ಹ್ಯಾರಿಸ್/ಪಾರಿಜಾತ ಸರ್ಕಲ್‌ನಲ್ಲಿ ಹೆಸರಿಗೆ ಮಾತ್ರ ಬೋರ್ಡ್ ಹಾಕಿಕೊಂಡು ಸರ್ಕಲ್ ನಿರ್ಮಿಸಿರುವುದು ಬಿಟ್ಟರೆ ಈವರೆಗೆ ಸರ್ಕಲ್ ಅಭಿವೃದ್ಧಿಪಡಿಸಿಲ್ಲ. ಹಾಳು ಬಿದ್ದಂತಿರುವ ವೃತ್ತವನ್ನು ಪುರಸಭೆ, ಊರಿನವರು ಅಭಿವೃದ್ಧಿ ಮಾಡುವಾಗ ಆಕ್ಷೇಪಿಸುವುದು ಸರಿಯಲ್ಲ ಎಂದು ಸದಸ್ಯ ಗಿರೀಶ್ ಹೇಳಿದರು. ಪುರಸಭೆ ನಿಗದಿಪಡಿಸಿದ ಸ್ಥಳದಲ್ಲೇ ಡಾ.ಅಂಬೇಡ್ಕರ್ ಪ್ರತಿಮೆ ಆಗಲೇಬೇಕು ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು.

ಅಂಗನವಾಡಿಗೆ ಜಾಗ ಗುರುತಿಸಿ

ಟಿಟಿ ರಸ್ತೆ ವಠಾರದಲ್ಲಿ ಅಂಗನವಾಡಿ ನಿರ್ಮಿಸಲು ಜಾಗವನ್ನು ಗುರುತಿಸುವಂತೆ ಅನೇಕ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿ ಮನವಿ ಮಾಡಿದ್ದರೂ ಈವರೆಗೆ ಅಂಗನವಾಡಿಗೆ ಜಾಗ ಗುರುತಿಸುವ ಕೆಲಸ ಆಗಿಲ್ಲ. ಟಿಟಿ ರಸ್ತೆ ಪರಿಸರದಲ್ಲಿ ಅಂಗನವಾಡಿ ಅವಶ್ಯಕತೆ ಇದ್ದು, ಜಾಗ ಗುರುತಿಸುವಂತೆ ಸದಸ್ಯೆ ವೀಣಾ ಭಾಸ್ಕರ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net