ನಗುವಿಗೆ ತಿಲಾಂಜಲಿಯಿಟ್ಟ ಹಾಸ್ಯನಟ...!

Raakhi 1
Published on

ಪಾರ್ಥಿವ ಶರೀರದ ಸುತ್ತ ಕಣ್ಣೀರ ಹೊಳೆ

ಮಡಿಲೊಳಗೆ ಸೇರಿಸಿಕೊಂಡಿತು ಇಳೆ

ವಿಜಯವಾಣಿ ಸುದ್ದಿಜಾಲ ಉಡುಪಿ

ರಾಕಿಯೆಂದರೆ ನೆನಪಾಗುವುದು ಎಲ್ಲರಿಗೂ ಆ ನಗುಮೊಗ ಮಾತ್ರ. ಅಂತಹ ಮನಸೆಳೆಯುತ್ತಿದ್ದ ನಗುವಿಗೆ ಯುವ ಹಾಸ್ಯನಟ ರಾಕೇಶ ಪೂಜಾರಿ ತಿಲಾಂಜಲಿ ಇಟ್ಟಿದ್ದಾರೆ. ಇಹಲೋಕದ ಯಾತ್ರೆ ಮುಗಿಸಿ ನಗು ಕಾಣಿಸದೇ ಮಾಯವಾಗಿದ್ದಾರೆ.

Raakhi 3
ಮಲ್ಪೆಯ ಆತನ ಮನೆಯೆದುರು ಇಟ್ಟಿದ್ದ ಪಾರ್ಥಿವ ಶರೀರದ ಸುತ್ತ ಮೂಕರೋದನ, ಕಣ್ಣೀರ ಕೋಡಿ ಹರಿಯುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಸಿನಿಲೋಕದಿಂದ ಬಂದಿದ್ದ ತಾರೆಗಳು, ಮಿತ್ರರು ಅಂತಿಮ ನಮನ ಸಲ್ಲಿಸಿದರು.

ಸ್ನೇಹಿತನ ಮೆಹೆಂದಿ ಕಾರ್ಯಕ್ರಮ

ಭಾನುವಾರ ರಾತ್ರಿ ಕಾರ್ಕಳ ನಿಟ್ಟೆ ಸಮೀಪದ ಮಿಯ್ಯಾರ ಎಂಬಲ್ಲಿ ಸ್ನೇಹಿತನ ಮನೆಯಲ್ಲಿ ನಡೆದಿದ್ದ ಮೆಹೆಂದಿ ಕಾರ್ಯಕ್ರಮದಲ್ಲಿ ರಾಕೇಶ ನೃತ್ಯ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ತಾಯಿ ಶಾಂಭವಿ, ಸಹೋದರಿ ರಕ್ಷಿತಾ ಅವರನ್ನು ಅಗಲಿದ್ದಾರೆ. ಎರಡು ವರ್ಷದ ಹಿಂದೆ ಅವರ ತಂದೆಯೂ ನಿಧನರಾಗಿದ್ದಾರೆ.

ಅಂತಿಮ ದರ್ಶನಕ್ಕೆ ಜನಸ್ತೋಮ

Raakhi 2
ಮಲ್ಪೆ ಸಮೀಪದ ಹೂಡೆಯ ಮನೆಯಲ್ಲಿ ಅಂತಿಮ ವಿಧಿ-ವಿಧಾನದ ಬಳಿಕ ಹೂಡೆ ಸಮುದ್ರ ತೀರದ ಮೈದಾನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಮೈದಾನಕ್ಕೆ ತರಲಾಯಿತು. ನಂತರ ಸಮೀಪದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಚಿತ್ರನಟರ ದೌಡು

ಚಿತ್ರನಟಿ ರಕ್ಷಿತಾ ಪ್ರೇಮ್​, ನಟ ಮಾಸ್ಟರ್​ ಆನಂದ್​, ನಿರೂಪಕಿ ಅನುಶ್ರೀ, ಸಂಗೀತ ನಿರ್ದೇಶಕ ಯೋಗರಾಜ ಭಟ್​, ಕಾಮಿಡಿ ಕಿಲಾಡಿಗಳ ತಂಡದ ಶಿವರಾಜ ಕೆಆರ್​ ಪೇಟೆ, ನಯನಾ, ವಾಣಿ, ಸೂರಜ, ಹಿತೇಶ, ಅನೀಶ, ಬಿಗ್​ ಬಾಸ್​ ಖ್ಯಾತಿಯ ಧನರಾಜ, ತುಕಾಲಿ ಸಂತು ಸೇರಿದಂತೆ ಆತನ ಅನೇಕ ಮಿತ್ರರು ಪಾಲ್ಗೊಂಡಿದ್ದರು. ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ನಮ್ಮ ತಂಡದ ಮುದ್ದಿನ ನಟ

* ಯೋಗರಾಜ ಭಟ್​ ಕಂಬನಿ

Raakhi 5
ನಮ್ಮ ತಂಡದ ಮುದ್ದಿನ ನಟನಾತ. ಎಲ್ಲರೂ ಇಲ್ಲಿಂದ ಹೋಗಲೇಬೇಕು. ಅದು ಸತ್ಯ. ಆದರೆ, ರಾಕಿ ಇಷ್ಟುಬೇಗ ನಮ್ಮಿಂದ ದುರವಾಗುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ. ಕರಾವಳಿ ಭಾಗದಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಪ್ರತಿಭಾನ್ವಿತ. ಜೀವಂತಿಕೆ ಇರುವ ನಟ. ಆತನ ನಗುವಿನ ಹಿಂದೆ ಎಂಥ ನೋವಿತ್ತೋ ಗೊತ್ತಿಲ್ಲ, ಎಲ್ಲರನ್ನೂ ನಗಿಸುತ್ತಿದ್ದ. ತಂಗಿಯ ಮದುವೆಯ ಕನಸು ಹೊತ್ತಿದ್ದ. ನಾವು, ನೀವೆಲ್ಲ ಸೇರಿ ಆತನ ಕನಸು ನನಸು ಮಾಡಬೇಕು. ನನ್ನದೇ ನಿರ್ದೇಶನದ "ಮನದ ಕಡಲು' ಚಿತ್ರದಲ್ಲೂ ಆತ ಅಭಿನಯಿಸುವವನಿದ್ದ. ಆದರೆ, ಕಣ್ಮುಚ್ಚಿ ಈಗ ಆನಂದವಾಗಿ ಚಿರನಿದ್ರೆಗೆ ಜಾರಿದ್ದಾನೆ ಎಂದು ಅಂತಿಮ ದರ್ಶನ ಪಡೆದ ಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ ಭಟ್​ ಕಂಬನಿ ಮಿಡಿದರು.

ಅದ್ದೂರಿಯಾಗಿ ತಂಗಿ ಮದುವೆ ಮಾಡುವ ಕನಸು

Raakhi 6
ರಾಕೇಶ ತಂದೆ ನಿಧನರಾದ ಬಳಿಕ ಸಣ್ಣ ವಯಸ್ಸಿನಲ್ಲೇ ಕುಟುಂಬ ಜವಾಬ್ದಾರಿ ಆತನ ಹೆಗಲಿಗೇರಿತ್ತು. ತನ್ನ ತಂಗಿಯ ಮದುವೆ ಅದ್ದೂರಿಯಾಗಿ ಮಾಡಿಸುವುದೇ ಆತನ ಕನಸಾಗಿತ್ತು. ಅವರ ಸಂತೋಷದ ದಾಂಪತ್ಯ ಜೀವನ ಕಣ್ತುಂಬಿಕೊಳ್ಳುವ ಆಸೆ ನನಗಿದೆ ಎಂದು ನಮ್ಮೆಲ್ಲರ ಬಳಿ ಆತ ಹೇಳಿಕೊಂಡಿದ್ದ. ನಮ್ಮ ಕುಟುಂಬದ ಕೂಸನ್ನು ಕಳೆದುಕೊಂಡಿದ್ದೇವೆ. ನಾನು ಮಂಗಳೂರಿಗೆ ಯಾವುದೇ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇಂತಹ ನೋವಿನ ಕಾರ್ಯಕ್ಕೆ ಬರಬೇಕಾಯಿತು. ಆತನ ಕುಟುಂಬಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ. ಊರಿನವರು, ಮಾಧ್ಯಮದವರೂ ಸಹ ಆತನ ಕುಟುಂಬಕ್ಕೆ ಆಸರೆಯಾಗಬೇಕು. ಎಲ್ಲರೂ ಸಹಾಯ ಮಾಡಬೇಕು ಎಂದು ಕಾಮಿಡಿ ಕಿಲಾಡಿಗಳು ತಂಡದ ಶಿವರಾಜ ಕೆಆರ್​ ಪೇಟೆ ವಿನಂತಿಸಿದ್ದಾರೆ.

ನಗುತ್ತಲೇ ಬಂದ ರಾಕೇಶ ನಗುತ್ತಲೇ ತೆರಳಿದ. ನಾವು ಅವನ ಮನೆಗೆ ಅಳುತ್ತ ಬರುವಂತಾಯಿತು. ಸದ್ಯ ಕಾಂತರಾ ಚಾಪ್ಟರ್​-1ರಲ್ಲಿ ನಟಿಸುತ್ತಿದ್ದ. ರಿಯಾಲಿಟಿ ಶೋ ಮೂಲಕ ಮಿಂಚುತ್ತಿದ್ದ. ಆತನೆಂದೂ ತನ್ನ ನೋವು ತೋರಿಸಿಕೊಂಡಿಲ್ಲ. ಖುಷಿಯಾಗಿರುತ್ತಿದ್ದ. ನಮ್ಮೆಲ್ಲರನ್ನೂ ಖುಷಿಯಾಗಿರುವಂತೆ ಮಾಡುತ್ತಿದ್ದ. | ಅನೀಶ. ಕಾಮಿಡಿ ಕಿಲಾಡಿ ತಂಡ. ಇತ್ತೀಚೆಗೆ ಆತ ಅಪಘಾತಕ್ಕೊಳಗಾಗಿದ್ದ. ಬೆಡ್​ನಲ್ಲಿ ಮಲಗಿದ್ದರೂ ಸಹ ಇದೊಂದು ಅನುಭವ ಎಂದಿದ್ದ. ಆತ ಅತ್ತಿದ್ದನ್ನು ನಾವು ನೋಡಿಲ್ಲ. ನಮ್ಮೂರಿಗೆ ಬನ್ನಿ ಬೀಚ್​ ಇದೆ, ಎಂಜಾಯ್​ ಮಾಡೋಣ ಅನ್ನುತ್ತಿದ್ದ. ಆದರೆ, ಈ ರೀತಿ ಬರುತ್ತೇವೆ ಎಂದು ಗೊತ್ತಿರಲಿಲ್ಲ. | ವಾಣಿ. ಕಾಮಿಡಿ ಕಿಲಾಡಿಗಳು ತಂಡ. ನಮ್ಮಿಬ್ಬರಿಗೂ ಮೊದಲಿನಿಂದಲೂ ಸ್ನೇಹ ಇತ್ತು. ಆಡಿಶನ್​ಗೆ ಹೋಗುವಾಗ ಒಂದೇ ಕೋಣೆಯ ಒಂದೇ ಬೆಡ್​ನಲ್ಲಿ ಮಲಗುತ್ತಿದ್ದೆವು. ನಿನ್ನೆ ರಾತ್ರಿ 10:30ಕ್ಕೆ ಕರೆ ಮಾಡಿ, 17ನೇ ತಾರೀಕು ಕಾರ್ಯಕ್ರಮ ಇದೆ ಬಾ ಅಂದಿದ್ದ. ಆದರೀಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ. | ಸೂರಜ. ಕಾಮಿಡಿ ಕಿಲಾಡಿಗಳು ತಂಡ ರಾಕೇಶನ ಮನಸ್ಸು ಮಗುವಿನ ಹಾಗೆ. ಆತ ಅಜಾತಶತ್ರು. ಆತನ ನಿಧನದ ನಂತರ ದೇವರ ಮೇಲೆ ಇದ್ದ ಅಲ್ಪ ನಂಬಿಕೆಯೂ ಕಳೆದಿದೆ. ಹೆಸರು, ದುಡ್ಡು ಅಂತ ಸಾಯ್ಬೇಡಿ ಎಂದು ನಮಗೆ ಹೇಳುತ್ತಿದ್ದ. ಕಲಾವಿದರೆಲ್ಲರೂ ರಾಕೇಶನ ಕುಟುಂಬಕ್ಕೆ ಸಹಾಯ ಮಾಡಬೇಕು. | ನಯನಾ. ಕಾಮಿಡಿ ಕಿಲಾಡಿಗಳು ತಂಡ ನನ್ನೊಂದಿಗೆ ರಾಕಿ ಅನ್ಯೋನ್ಯವಾಗಿದ್ದ. ಅದ್ಭುತ ಪ್ರತಿಭೆ ಆತನಲ್ಲಿತ್ತು. ಸದಾ ನಗುತ್ತಿದ್ದ ಆತನ ಮುಖವೇ ಈಗಲೂ ಕಣ್ಣೆದುರಿಗೇ ಬರುತ್ತಿದೆ. ಅವನ ಅಮ್ಮ, ತಂಗಿಯನ್ನು ನೋಡಿದಾಗ ಬಹಳ ದು:ಖವಾಗುತ್ತಿದೆ. ಆರು ತಿಂಗಳ ಹಿಂದೆ ಅಪಘಾತಕ್ಕೊಳಗಾಗಿದ್ದಾಗ ಬೈದು ಬುದ್ಧಿ ಹೇಳಿದ್ದೆ. ನಮ್ಮಿಬ್ಬರ ಫೋಟೋವನ್ನು ಆತ ಬಹಳ ಕಾಲ ವಾಟ್ಸಾಪ್​ನಲ್ಲಿ ಡಿಪಿ ಮಾಡಿಕೊಂಡಿದ್ದನು. ನಾವಿಬ್ಬರು ಅಕ್ಕ-ತಮ್ಮನಂತೆಯೇ ಇದ್ದೆವು. ಆತನ ನಗು ನನ್ನಿಂದ ಮರೆಯಲಾಗದು. | ರಕ್ಷಿತಾ ಪ್ರೇಮ್​. ನಟಿ. ನಮ್ಮ ಕರ್ನಾಟಕದ ಅದರಲ್ಲೂ ಕರಾವಳಿಯ ಅಪ್ಪಟ ಪ್ರತಿಭೆ ರಾಕಿ. ಅಕ್ಕಾ..ಅಕ್ಕಾ.. ಎಂದು ಬಾಯಿತುಂಬ, ಮನಸಾರೆ ಕರೆಯುತ್ತಿದ್ದ. ಸತ್ತು ಮಲಗಿದ್ದರೂ ಆತ ನನ್ನನ್ನು ಅಕ್ಕಾ ಎಂದು ಕೂಗಿದಂತೆಯೇ ಭಾಸವಾಗುತ್ತಿದೆ. ಅಪರೂಪದ ತಮ್ಮನನ್ನು ಕಳೆದುಕೊಂಡಿದ್ದೇನೆ. ತಮಾಷೆಗೂ ಸಹ ಯಾರ ಮನಸ್ಸನ್ನೂ ನೋಯಿಸುವವನಲ್ಲ. ಆದರೀಗ ಎಲ್ಲರ ಮನಸ್ಸಿಗೆ ನೋವಾಗುವಂತೆ ಚಿರನಿದ್ರೆಗೆ ಜಾರಿದ್ದಾನೆ. ಆತ ಒಳ್ಳೆಯವ. ಅದಕ್ಕೆ ದೇವರು ಬೇಗ ಕರೆಸಿಕೊಂಡರು. | ಅನುಶ್ರೀ. ನಿರೂಪಕಿ.

ನಾಟಕದಿಂದ ಕಿರುತೆರೆಗೆ...

Raakhi 4
ರಾಕೇಶನ ನಟನಾ ಪಯಣ ಆರಂಭಗೊಂಡದ್ದು 'ಚೈತನ್ಯ ಕಲಾವಿದರು' ನಾಟಕ ತಂಡದ ಮೂಲಕ. ಬಳಿಕ 2014ರಲ್ಲಿ ಖಾಸಗಿ ಚಾನಲ್​ನಲ್ಲಿ 'ಕಡ್ಲೆ ಬಜಿಲ್​' ಎಂಬ ತುಳು ರಿಯಾಲಿಟಿ ಶೋ ಮೂಲಕ ಜನರ ಮನ ಗೆದ್ದಿದ್ದರು. ನಂತರ ಹಲವು ಸಿನಿಮಾಗಳಿಗೆ ಆಡಿಷನ್​ ನೀಡಿದರು. 150ಕ್ಕೂ ಹೆಚ್ಚು ಆಡಿಷನ್​ ನೀಡಿದ ಬಳಿ 2018ರಲ್ಲಿ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು ಸೀಸನ್​-2' ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಇದರಲ್ಲಿ ರನ್ನರ್​ ಅಪ್​ ತಂಡದ ಸದಸ್ಯರಾಗಿದ್ದು, 2020ರಲ್ಲಿ 'ಕಾಮಿಡಿ ಕಿಲಾಡಿಗಳು ಸೀಸನ್​-3' ವಿಜೇತರಾಗಿದ್ದರು. ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್​, ತುಯಿನಾಯೆ ಪೋಯೆ ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net