ಜಿಲ್ಲೆಗಳ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಕ್ರಮ

4ckm1- hostel story
ಚಿಕ್ಕಮಗಳೂರು ನಗರ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ವಿದ್ಯಾರ್ಥಿನಿಲಯ.
Published on

ಚಿಕ್ಕಮಗಳೂರು: ಸರ್ಕಾರಿ ವಿದ್ಯಾರ್ಥಿ ನಿಲಯಗಳು ಎಂದರೇ ಮೂಗು ಮೂರಿಯುವವರೇ ಹೆಚ್ಚು. ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳಡಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ, ಮೂಲಸೌಲಭ್ಯಗಳನ್ನು ಕಲ್ಪಿಸುತ್ತದೆ. ಆದರೆ ಸಾಕಷ್ಟು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿ ಸಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಸಮರ್ಪಕ ಕುಡಿಯುವ ನೀರು, ಊಟ, ತಿಂಡಿಯನ್ನು ಮೆನು ಪ್ರಕಾರ ನೀಡಲಾಗುತ್ತಿದೆಯೇ. ಆಟದ ಮೈದಾನ, ಗ್ರಂಥಾಲಯ, ಹೀಗೆ ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಬಗ್ಗೆ ವಿಚಾರಣೆಗೆ ಮುಂದಾಗಿರುವ ಸರ್ಕಾರ ಅಧಿಕಾರಿಗಳ ಕಡ್ಡಾಯವಾಗಿ 15 ದಿನಗಳಿಗೊಮ್ಮೆ ವಿದ್ಯಾರ್ಧಿ ನಿಲಯಗಳಿಗೆ ಭೇಟಿ ವಿದ್ಯಾರ್ಥಿಗಳ ಸಮಸ್ಯೆ ಅಲಿಸಲು ಸೂಚಿಸುವ ಮೂಲಕ ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ಮುಂದಾಗಿದೆ.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಐಟಿಡಿಪಿ, ಅಲ್ಪ ಸಂಖ್ಯಾತರ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 224ವಿದ್ಯಾರ್ಥಿ ನಿಲಯಗಳಿದ್ದು, ಆ ಪೈಕಿ 103ಮೆಟ್ರಿಕ್ ಪೂರ್ವ, 69ಮೆಟ್ರಿಕ್ ನಂತರ, 34ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 15ಆಶ್ರಯ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟು 21,635 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 224 ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, 169 ಸ್ವಂತ ಕಟ್ಟಡ, 13 ಉಚಿತ ಕಟ್ಟಡ ಹಾಗೂ 42 ಬಾಡಿಗೆ ಕಟ್ಟಡಗಳಲ್ಲಿವೆ. ಬಾಡಿಗೆ ಕಟ್ಟದಲ್ಲಿ ಇರುವ ವಿದ್ಯಾರ್ಥಿನಿಲಯಗಳಿಗೆ ಈಗಾಗಲೇ 10 ನಿವೇಶನಗಳನ್ನು ಗುರುತಿಸಲಾಗಿದ್ದು, 14ಕಾಮಗಾರಿ ಪ್ರಗತಿಯಲ್ಲಿದೆ. 5ಕಟ್ಟಡಗಳ ಕಾಮಗಾರಿ ಬಾಕಿ ಇದೆ.
ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ಅಥವಾ ದೂರದ ಊರುಗಳಿಂದ ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಪ್ರಯಾಣ ಮಾಡಿ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ. ಬಡ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಬೇಕು ಎಂಬ ಪರಿಕಲ್ಪನೆಯಿಂದ ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿವೆ. ಅಭಿವೃದ್ಧಿಗೆ ತಕ್ಕಂತೆ ಪ್ರತಿ ವರ್ಷ ಬಜೆಟ್‌ನಲ್ಲಿ ಇಲಾಖೆವಾರು ಅನುದಾನವನ್ನು ಸರ್ಕಾರ ಮೀಸಲಿರಿಸುತ್ತದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದಿಯೇ, ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದಿಯೇ ಎಂಬುದರ ಬಗ್ಗೆ ಪರಿಶೀಲಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವಿಶೇಷ ಗಮನ ಹರಿಸಿದ್ದು, ತಂಡಗಳನ್ನು ರಚನೆ ಮಾಡಿದೆ.

ಮಕ್ಕಳ ಕಲಿಕೆ ಬಗ್ಗೆ ಪರಿಶೀಲನೆ: ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿದ್ಯಾರ್ಥಿಗಳನ್ನು ನಿಗದಿಪಡಿಸಿದ್ದು, ಪ್ರತಿ 15 ದಿನಕ್ಕೊಮ್ಮೆ ನಿಗದಿತ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸುತ್ತಾರೆ. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಅಲಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದಾರೆ, ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆಗಳಲ್ಲಿ ಯಾವ ರೀತಿ ಅಂಕಗಳಿಸುತ್ತಿದ್ದಾರೆ, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ, ಒಟ್ಟಾರೆಯಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಗಮನ ಹರಿಸುತ್ತಾರೆ. ಕಲಿಕೆಯಲ್ಲಿ ಹಿಂದೆ ಉಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳುತ್ತಾರೆ. ಮಕ್ಕಳು ಜೀವನದಲ್ಲಿ ಡಾಕ್ಟರ್, ಇಂಜನಿಯರ್, ಪೊಲೀಸ್, ವಿಜ್ಞಾನಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂಬುದರ ಬಗ್ಗೆ ಕನಸ್ಸು ಕಂಡಿರುತ್ತಾರೆ. ಗುರಿ ಸಾಧನೆಗೆ ತಕ್ಕ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ.

ಅಧಿಕಾರಿಗಳ ಭೇಟಿಯಿಂದ ಸುಧಾರಣೆ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸ್ನಾನ ಮಾಡಲು ಬಿಸಿ ನೀರು, ಆಡುಗೆ ಕೋಣೆ, ಆಟದ ಮೈದಾನ, ಊಟ-ತಿಂಡಿಗೆ ಗುಣಮಟ್ಟದ ತರಕಾರಿ, ಆಹಾರ ಸಮಾಗ್ರಿಗಳು ಸರಬರಾಜು ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದಾಗ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ತಿಂಗಳಿಗೊಮ್ಮೆ ನಡೆಯುವ ಪರಿಶೀಲನಾ ಸಭೆಗೆ ಸಲ್ಲಿಸಬೇಕು. ಕೊರತೆಯಿರುವ ಸೌಲಭ್ಯಗಳನ್ನು ವಿದ್ಯಾರ್ಥಿನಿಲಯಕ್ಕೆ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲ್ ಕೃಷ್ಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net