ಸಚಿವ ಸ್ಥಾನಕ್ಕಿಂತ ಸಿನಿಮಾವೇ ಮುಖ್ಯ..ಅಮಿತ್ ಶಾಗೆ ಸುರೇಶ್ ಗೋಪಿ ಹೀಗೆ ಹೇಳಲು ಇದೇ ಕಾರಣ!

suresh gopi
Published on

ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕಿಂತ ನನಗೆ ಸಿನಿಮಾಗಳೇ ಮುಖ್ಯ. ನಟನೆಯಿಂದಾಗಿ ಸಚಿವ ಸ್ಥಾನ ಕಳೆದುಕೊಂಡರೂ ಪರವಾಗಿಲ್ಲ ಎಂದು ಸುರೇಶ್ ಗೋಪಿ ನಿರ್ಧರಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್​ ಶಾ ಅವರಿಗೆ ಮಲಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಈ ರೀತಿ ಹೇಳಿರುವುದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ನಟ ಸುರೇಶ್ ಗೋಪಿ ಮೋದಿಯವರ ಸಂಪುಟದಲ್ಲಿ ಪ್ರಸ್ತುತ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಅವರು ಇತ್ತೀಚೆಗೆ ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಿನಿಮಾ, ಅಭಿನಯ ಎಂದರೆ ತುಂಬಾ ಇಷ್ಟ ಎಂದು ಹೇಳಿದರು. ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲು ಅಮಿತ್ ಶಾ ಅನುಮತಿ ಕೇಳಿದ್ದೇನೆ ಎಂದು ಸುರೇಶ್ ಗೋಪಿ ಬಹಿರಂಗಪಡಿಸಿದ್ದಾರೆ.

ಸಿನಿಮಾಗಳು ತಮ್ಮ ಪ್ಯಾಶನ್ ಎಂದ ಸುರೇಶ್ ಗೋಪಿ, ತಾವು ಒಪ್ಪಿದ ಸಿನಿಮಾಗಳ ಚಿತ್ರೀಕರಣ ಆರಂಭಿಸಲು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಅನುಮತಿ ಕೋರಿದ್ದೇನೆ ಎಂದು ಹೇಳಿದರು. ಆದರೆ ಎಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂದು ಅಮಿತ್ ಶಾ ಕೇಳಿದ್ದಕ್ಕೆ 22 ಸಿನಿಮಾಗಳು ಎಂದು ಹೇಳಿದರಂತೆ. ಆಗ ಅಮಿತ್ ಶಾ ಕೊಟ್ಟ ಪತ್ರವನ್ನು ಪಕ್ಕಕ್ಕಿಟ್ಟರು ಎಂದು ಸುರೇಶ್ ಗೋಪಿ ಹೇಳಿದ್ದಾರೆ.

ಸೆ.6ರಿಂದ ಒಟ್ಟಕೊಂಬನ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಾಗಿ ಸುರೇಶ್ ಗೋಪಿ ಸ್ಪಷ್ಟಪಡಿಸಿದ್ದಾರೆ. ಒಂದೆಡೆ ಶೂಟಿಂಗ್ ನಲ್ಲಿ ಭಾಗವಹಿಸುತ್ತಲೇ ಮತ್ತೊಂದೆಡೆ ಕೇಂದ್ರ ಸಚಿವರ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಅವರು ಹೇದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net