ಮನೆ ಹತ್ತಿರ ಮಲಗುತ್ತದೆಯೆಂದು ನಾಯಿ ಮೇಲೆ ಆ್ಯಸಿಡ್​ ಸುರಿದ ಪಾಪಿ ದಂಪತಿ

dog
Published on

ಥಾಣೆ: ನಾಯಿಗಿಂತ ನಿಯತ್ತಿನ ಪ್ರಾಣಿಯಿಲ್ಲ ಎನ್ನುತ್ತಾರೆ. ಆದರೆ ಅದೇ ನಿಯತ್ತಿನ ಪ್ರಾಣಿಯ ಮೇಲೆ ಮನುಷ್ಯ ಅದೆಷ್ಟು ಪ್ರೀತಿ ತೋರಿಸುತ್ತಾನೆ? ಸುಮ್ಮನೆ ಮಲಗಿದ್ದ ನಾಯಿ ಮೇಲೆ ಆ್ಯಸಿಡ್​ ದಾಳಿ ಮಾಡುವ ಕ್ರೂರ ಬುದ್ಧಿಯೂ ಮನುಷ್ಯರಲ್ಲಿದೆ ಅಂದರೆ ನೀವು ನಂಬಲೇ ಬೇಕು.

ಇಂತದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ. ಅಲ್ಲಿನ ಬೀದಿ ನಾಯಿಯೊಂದು ಪ್ರತಿದಿನ ಕಯೂಮ್​ ಖಾನ್​ ಮತ್ತು ಅಫ್ರೀನ್​ ದಂಪತಿಯ ಮನೆ ಬಳಿ ಮಲಗುತ್ತಿತ್ತಂತೆ. ಈ ರೀತಿ ನಾಯಿ ಮಲಗುವುದನ್ನು ಸಹಿಸಲಾಗದ ದಂಪತಿ ನಾಯಿ ಮೇಲೆ ಆ್ಯಸಿಡ್​ ಸುರಿದಿದ್ದಾರೆ. ಇದರಿಂದಾಗಿ ನಾಯಿ ಮುಂದಿನ ಎರಡು ಕಾಲು ಮತ್ತು ಕಿವಿಗಳನ್ನು ಕಳೆದುಕೊಂಡಿದೆ.

ನಾಯಿಯ ಮೇಲೆ ಆ್ಯಸಿಡ್​ ದಾಳಿ ಮಾಡಿರುವ ದಂಪತಿಯ ಮೇಲೆ ದಂಡ ಸಂಹಿತೆ (ಐಪಿಸಿ)ಯ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪಿಸಿಎ) ಕಾಯ್ದೆ 1960 ಮತ್ತು ಮಹಾರಾಷ್ಟ್ರ ಪೊಲೀಸ್​ ಕಾಯ್ದೆ 1951ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಗಾಯಗೊಂಡಿದ್ದ ನಾಯಿಯನ್ನು ಸ್ಥಳೀಯ ಸಂಘಟನೆಯೊಂದು ಗುರುತಿಸಿ, ಪ್ರಾಣಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net