ಕೋಟ: ವನದೇವತೆ ಕ್ಷೇತ್ರ ಅಚ್ಲಾಡಿಯ ಶ್ರೀ ಯಕ್ಷೇಶ್ವರೀ ಸಪರಿವಾರ ದೇಗುಲದ ವರ್ಧಂತಿ, ನೂತನವಾಗಿ ನಿರ್ಮಿಸಿದ ತೀರ್ಥಬಾವಿ ಸಮರ್ಪಣೆ ಹಾಗೂ ಜೀರ್ಣೋದ್ಧಾರಗೊಂಡ ನಾಗಸಾನ್ನಿಧ್ಯದ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ಜೂ.3ರಿಂದ 5ರ ತನಕ ನಡೆಯಿತು.
ನಾಗಸಾನ್ನಿಧ್ಯದಲ್ಲಿ ವಿಶೇಷಪೂಜೆ, ಆಶ್ಲೇಷಬಲಿ, ದೀಪ ನಮಸ್ಕಾರ ಮೊದಲಾದ ಧಾರ್ಮಿಕ ಕಾರ್ಯಕ್ರಮ ಹಾಗೂ ಯಕ್ಷೇಶ್ವರೀ ಸನ್ನಿಧಿಯಲ್ಲಿ ಕೂಪಶಾಂತಿ, ಕಲಶಾಭಿಷೇಕ, ತುಲಾಭಾರ ಸೇವೆ, ತೀರ್ಥಬಾವಿ ಸಮರ್ಪಣೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ನಡೆಯಿತು.
ದೇಗುಲದ ಅರ್ಚಕರಾದ ಮಂಜುನಾಥ ಭಟ್ ಅಚ್ಲಾಡಿ, ವೆಂಕಟೇಶ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದಾನಿಗಳಾದ ಆನಂದ ಸಿ.ಕುಂದರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಗಣೇಶ್ ಕಾಂಚನ್ ಮೊದಲಾದವರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇಗುಲದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ದೇಗುಲದ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು.