
ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಂದ ಗೌರವ
ಸಂಸ್ಥೆಯ ಸಿಇಒ ಮೋಹನ ಹೆಗಡೆ ಸಂತಸ
ವಿಜಯವಾಣಿ ಸುದ್ದಿಜಾಲ ಉಡುಪಿ
ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 2025ನೇ ಸಾಲಿನ ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿ ಲಭಿಸಿದೆ. ಗ್ರೀನ್ ಆಸ್ಕರ್ ಎಂಬ ಹೆಗ್ಗಳಿಕೆ ಹೊಂದಿರುವ ಈ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮೂರನೇ ಬಾರಿ ಮುಡಿಗೇರಿಸಿಕೊಂಡ ಖ್ಯಾತಿಗೆ ಸೆಲ್ಕೋ ಸಂಸ್ಥೆ ಭಾಜನವಾಗಿದೆ.
ಇದು 25ನೇ ಆಶ್ಡೆನ್ ಪ್ರಶಸ್ತಿಯಾಗಿದ್ದು, ಜೂ.11ರಂದು ಲಂಡನ್ನ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಲಿಂಕ್ಡ್ ಇನ್ ಎಂಟರ್ಪ್ರೈಸೆಸ್ ಅಕೌಂಟ್ ಡೈರೆಕ್ಟರ್ ಮತ್ತು ಗೋ ಗ್ರೀನ್ ಲೀಡ್ನ ಮುಖ್ಯಸ್ಥ ಕ್ರಿಸ್ ಬೆನೆಟ್ ಪ್ರಶಸ್ತಿ ಪ್ರದಾನ ಮಾಡಿದರು. ಸೆಲ್ಕೋ ಸಿಇಒ ಮೋಹನ ಹೆಗಡೆ ಮತ್ತು ಡಿಜಿಎಂ ಸುದೀಪ್ತ ಘೋಷ್ ಪ್ರಶಸ್ತಿ ಸ್ವೀಕರಿಸಿದರು.
ಸಾಧನೆಗೆ ಶ್ಲಾಘನೆ
ಇಂಗ್ಲಂಡ್ನ ಗೋ ಗ್ರೀನ್ನ ಹವಾಮಾನ ರಾಯಭಾರಿ ರಾಚೆಲ್ ಕೈಟ್ ಮತ್ತು ಉಗಾಂಡಾದ ಪರಿಸರವಾದಿ ವನೆಸ್ಸಾ ನಕೇಟ್ ಮಾತನಾಡಿ, 2005, 2007ರಲ್ಲಿಯೂ ಸೆಲ್ಕೋ ಸಂಸ್ಥೆಗೆ ಆಶ್ಡೆನ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯ 25ನೇ ವರ್ಷದ ಗೌರವವನ್ನೂ ಮುಡಿಗೇರಿಸಿಕೊಂಡ ಸಂಸ್ಥೆಯ ಸಾಧನೆಯಿಂದಾಗಿ ಭಾರತದ ಪರಿಸರ ಕ್ಷೇತ್ರವೇ ಹೆಮ್ಮೆ ಪಡುವಂತಾಗಿದೆ ಎಂದು ಶ್ಲಾಘಿಸಿದರು.
ಜನಸಾಮಾನ್ಯರ ಬದುಕಿಗೆ ಬೆಳಕು
ಡಾ. ಹರೀಶ ಹಂದೆ ಮತ್ತು ನೆವಿಲ್ಲೆ ವಿಲಿಯಮ್ಸ್ ಅವರು 1995ರಲ್ಲಿ ಸ್ಥಾಪಿಸಿದ ಸೆಲ್ಕೋ ಸಂಸ್ಥೆಯು ಕರ್ನಾಟಕದ ಮನೆಗಳಿಗೆ ಸೌರಬೆಳಕು ಕೈಗೆಟುಕುವಂತೆ ಮಾಡಿದೆ. ಅಲ್ಲದೆ, ದೇಶದ ಪ್ರಮುಖ ಸಾಮಾಜಿಕ ಉದ್ಯಮವಾಗಿ ಬೆಳೆದಿದೆ. ಆಂಧ್ರ ಪ್ರದೇಶ, ಬಿಹಾರ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಸಾಮಾನ್ಯರಿಗೆ ಹಸಿರು ಇಂಧನ ಲಭಿಸಲು ಅಹರ್ನಿಶಿ ಶ್ರಮಿಸುತ್ತಿದೆ. ಆಫ್ರಿಕಾ ಮತ್ತು ಆಗ್ನೇಯ ಏಷಿಯಾದಲ್ಲಿಯೂ ಪಾಲುದಾರಿಕೆ ಹೊಂದಿದೆ. ಈವರೆಗೆ 6 ಲಕ್ಷಕ್ಕೂ ಅಧಿಕ ಸೌರ ಉತ್ಪನ್ನಗಳನ್ನು ಮಾರಾಟ ಮಾಡಿದೆ. 80 ಲಕ್ಷಕ್ಕೂ ಹೆಚ್ಚು ಜನರಿಗೆ ಸೌರ ವಿದ್ಯುತ್ನ ಪರಿಣಾಮ ಲಭ್ಯವಾಗುವಂತೆ ಮಾಡಿದೆ. ಗ್ರಾಮೀಣ ಭಾಗದಲ್ಲಿ 24 ಸಾವಿರಕ್ಕೂ ಹೆಚ್ಚು ಜನರಿಗೆ ಸೌರ ಜೀವನೋಪಾಯ ವ್ಯವಸ್ಥೆ ದೊರೆತಿದೆ. 5 ಲಕ್ಷಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಸೌರಶಕ್ತಿ ಚಾಲಿತ ಡಿಜಿಟಲ್ ತರಗತಿಯ ಕೊಠಡಿ ರೂಪಿಸಿದೆ. 60 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೌರವಿದ್ಯುತ್ ಅಳವಡಿಸಿದೆ ಎಂದು ಸೆಲ್ಕೋ ಸಿಇಒ ಮೋಹನ ಹೆಗಡೆ ಮಾಹಿತಿ ನೀಡಿದರು.
ಬಡತನದ ಸವಾಲು ಎದುರಿಸುವಲ್ಲಿ ಹಾಗೂ ಸಹಜ ಸೌಲಭ್ಯದ ಪರ್ಯಾಯ ಇಂಧನ ಶಕ್ತಿಯ ಬಳಕೆಯಿಂದ ಸುಸ್ಥಿರ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಸೆಲ್ಕೋ ತೊಡಗಿಕೊಂಡಿದೆ. ಸಂಸ್ಥೆಗೆ ಲಭಿಸಿದ ಈ ಪ್ರಶಸ್ತಿಯು ಹಸಿರು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಂದ ದೊಡ್ಡ ಗೌರವವಾಗಿದೆ. ಈ ಸಾಧನೆಯ ಕೀರ್ತಿಯು ನಮ್ಮ ಆಡಳಿತ ಮಂಡಳಿ, ಡಿಜಿಎಂಗಳು, ಸಹೋದ್ಯೋಗಿಗಳು ಹಾಗೂ ನಮ್ಮೊಡನೆ ವ್ಯವಹರಿಸಿದ ಎಲ್ಲರಿಗೂ ಸಲ್ಲುತ್ತದೆ. ಅಲ್ಲದೆ, ಸೌರ ವಿದ್ಯುತ್ ಬಳಕೆ, ಪ್ರಯೋಗ ಮತ್ತು ಪ್ರಚಾರದಲ್ಲಿ ರಾಜ್ಯ- ಕೇಂದ್ರ ಸರ್ಕಾರದ ನೆರವು ಸ್ಮರಣಾರ್ಹ.
| ಮೋಹನ ಹೆಗಡೆ. ಸೆಲ್ಕೋ ಸಿಇಒ2025ನೇ ಸಾಲಿನ ಆಶ್ಡೆನ್ ಪ್ರಶಸ್ತಿ ವಿಜೇತ ಸೆಲ್ಕೋ ಸಂಸ್ಥೆಯು ನಮ್ಮನ್ನೆಲ್ಲ ಆಶಾದಾಯಕ, ಉತ್ತಮ ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ. ಅವರಿಂದ ರೂಪುಗೊಂಡ ಪರಿಹಾರೋಪಾಯಗಳು ಸಮಾಜದಲ್ಲಿ ಅಗಾಧವಾಗಿ ಪರಿಣಾಮ ಬೀರಬಲ್ಲವು ಎಂಬುದು ಸಾಬೀತಾಗಿದೆ.
| ಡಾ. ಅಶೋಕ ಸಿನ್ಹಾ. ಆಶ್ಡೆನ್ ಸಿಇಒ