

ಶಿಕಾರಿಪುರ: ಗುರಿ ಸಾಧಿಸಲು ಗುರುವಿನ ಮಾರ್ಗದರ್ಶನ ಮುಖ್ಯ. ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿರುವುದು ಗುರು ಪರಂಪರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಸುರಗಿಹಳ್ಳಿ ಶ್ರೀ ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವ, ನೂತನ ಗದ್ದುಗೆ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಮಹಾರಾಜರ ಕಾಲದಲ್ಲಿಯೂ ಮಾರ್ಗದರ್ಶನ ನೀಡಲು ರಾಜಗುರುಗಳು ಇರುತ್ತಿದ್ದರು. ಗುರುಪರಂಪರೆ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಮನೆ ಮನೆಗಳಲ್ಲಿ ಧಾರ್ಮಿಕ ಚಿಂತನೆಗಳನ್ನು ಮೂಡಿಸುವಲ್ಲಿ ಸಹಕಾರಿ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸುರಗಿಹಳ್ಳಿ ಶ್ರೀಮಠಕ್ಕೆ ಅನುದಾನ ನೀಡಿದ್ದರು. ಮಠ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವುದು ಸಂತಸ ತಂದಿದೆ. ಮಹಾಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿ 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕೂಡಲಸಂಗಮ ಮಾದರಿಯಲ್ಲಿ ಒಂದು ಅಪೂರ್ವ ಪ್ರವಾಸಿ ತಾಣವಾಗಲಿದೆ ಎಂದರು.
ವಿಜ್ಞಾನ ಮತ್ತು ಅಧ್ಯಾತ್ಮ ಅತ್ಯಂತ ಮುಖ್ಯ. ಹಿರಿಯರು ಪುರಾತನ ಕಾಲದಿಂದ ಅನುಸರಿಸಿಕೊಂಡು ಬಂದಿರುವ ಆಚರಣೆಗಳು ಅರ್ಥಪೂರ್ಣ ಮತ್ತು ಆರೋಗ್ಯ ಪೂರ್ಣ. ಗುರುಗಳ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರಿಯಬೇಕು. ಡಾ. ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯ
ಸುರಗಿಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ನಾಯಕತ್ವ ಜನಪರ ಹೋರಾಟದಿಂದ ಲಭಿಸುವ ಪದವಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಕಳಕಳಿಯಿಂದ ಮಠ ನಿರ್ಮಾಣವಾಗಿದೆ. ಭಕ್ತರ ಸಂಕಲ್ಪದಂತೆ ಲಿಂಗೈಕ್ಯ ತಪಸ್ವಿ ಶ್ರೀ ವಿರುಪಾಕ್ಷ ಸ್ವಾಮಿಗಳ ಗದ್ದುಗೆ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಭಕ್ತರಿಗಾಗಿ ದಾಸೋಹ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಸಾದರಹಳ್ಳಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಶ್ರೀ ಮಠದ ಮೂಕೇಶ್ವರ ಪ್ರಭೆ ಪತ್ರಿಕೆ ಬಿಡುಗಡೆ ಮಾಡಿದರು.
ಅಖಿಲ ಭಾರತ ವೀರಶೈವ ಸಮಾಜ ಮಹಾಸಭಾದ ರಾಜ್ಯ ಸಮಿತಿ ನಿರ್ದೇಶಕ ಎನ್.ವಿ.ಈರೇಶ್, ತಾಲೂಕು ಅಧ್ಯಕ್ಷ ಸುಧೀರ್ ಮಾರವಳ್ಳಿ, ಆರಾಧನಾ ಸಮಿತಿ ಸದಸ್ಯೆ ವೀಣಾ ಹಿರೇಮಠ್, ಮರಾಠ ಸಮಾಜದ ತಾಲೂಕು ಅಧ್ಯಕ್ಷ ಎಚ್.ಸಿ.ಗುರುರಾಜ್, ಜಗತಾಪ್ ಇತರರಿದ್ದರು.