19 ವರ್ಷದ ಯುವತಿಯನ್ನು 4ನೇ ಮಹಡಿಯಿಂದ ದೂಡಿದ್ದ ಭೂಪನ ಕಾಲಿಗೆ ಬಿತ್ತು ಗುಂಡು..!

suphiyan
Published on

ಲಖನೌ: 19 ವರ್ಷದ ಯುವತಿಯನ್ನು ಕೊಂದ ಆರೋಪಿ ಸೂಫಿಯಾನ್ ಎಂಬಾತನನ್ನು ಶುಕ್ರವಾರ ಪೊಲೀಸರು ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸೂಫಿಯಾನ್​ ಆ ಮಹಿಳೆಯ ಪಕ್ಕದ ಮನೆಯಲ್ಲಿ ವಾಸವಿದ್ದ. ಈತ ಆಕೆ ಜೊತೆ ಸ್ನೇಹ ಬೆಳೆಸಿ ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮಂಗಳವಾರ ರಾತ್ರಿ ಈತ ಯುವತಿಯನ್ನು ಕಟ್ಟಡದ 4ನೇ ಮಹಡಿಯಿಂದ ದೂಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಲಖನೌದ ದುಬಗ್ಗಾ ಪ್ರದೇಶದಲ್ಲಿ ಶುಕ್ರವಾರ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸುಫಿಯಾನ್‌ನನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ ಪಿಯೂಷ್ ಮೊರ್ಡಿಯಾ ಮಾಹಿತಿ ನೀಡಿದ್ದಾರೆ.

ದುಬಗ್ಗಾ ಸ್ಟೇಷನ್​ನ ಅಧಿಕಾರಿ ಸುಖವೀರ್ ಸಿಂಗ್ ಭದೌರಿಯಾ 'ಸೂಫಿಯಾನ್‌ನನ್ನು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎನ್‌ಕೌಂಟರ್‌ ಮೂಲಕ ಬಂಧಿಸಲಾಗಿದೆ. ಆರೋಪಿಯ ಬಲ ಪಾದಕ್ಕೆ ಗುಂಡು ತಗುಲಿದ್ದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ದಾಖಲಿಸಲಾಗಿದೆ' ಎಂದು ಮಾಹಿತಿ ನೀಡಿದರು. ಈ ಹಿಂದೆ ಸೂಫಿಯಾನ್‌ ಬಗ್ಗೆ ಮಾಹಿತಿ ನೀಡಿದವರಿಗೆ ₹ 25 ಸಾವಿರ ಬಹುಮಾನ ಘೋಷಿಸಲಾಗಿತ್ತು.

20ರ ಹರೆಯದ ಆರೋಪಿ ಸೂಫಿಯಾನ್ ಮೃತ ಯುವತಿಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಜೊತೆಗೆ ಉತ್ತರಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net