ಆರ್‌ಟಿಒ ಅಧಿಕಾರಿ ತರಾಟೆಗೆ : ದಾಖಲೆ ಪರಿಶೀಲಿಸುವ ನೆಪದಲ್ಲಿ ಸ್ಕೂಲ್ ಬಸ್ಸನ್ನು ರಸ್ತೆ ಬದಿಯಲ್ಲಿ ಕಾಯಿಸಿದ ಆರೋಪ

school bus
ಮಾರ್ಪಾಡಿ ಗ್ರಾಮದ ಮರಿಯಾಡಿಯಲ್ಲಿ ಆರ್‌ಟಿಒ ಅಧಿಕಾರಿ ಶಾಲಾ ವಾಹನವನ್ನು ನಿಲ್ಲಿಸಿರುವುದು
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮಾರ್ಪಾಡಿ ಗ್ರಾಮದ ಮರಿಯಾಡಿಯಲ್ಲಿ ದಾಖಲೆ ಪರಿಶೀಲಿಸುವ ನೆಪದಲ್ಲಿ ಶಾಲಾ ಮಕ್ಕಳಿದ್ದ ವಾಹನವನ್ನು ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆ ಬದಿಯಲ್ಲಿ ನಿಲ್ಲಿಸಿದ ಆರ್‌ಟಿಒ ಅಧಿಕಾರಿಯನ್ನು ಸ್ಥಳೀಯರು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೂಡುಬಿದಿರೆ ಪ್ರಾಥಮಿಕ ಶಾಲೆಯ ಮಕ್ಕಳು ಎಂದಿನಂತೆ ಬುಧವಾರ ಸಂಜೆ ಶಾಲೆ ಬಿಟ್ಟ ನಂತರ ಸ್ಕೂಲ್ ಬಸ್‌ನಲ್ಲಿ ಕೋಟೆಬಾಗಿಲು ಮಾರ್ಗವಾಗಿ ಮನೆಗೆ ಹೊರಟಿದ್ದರು. ಮರಿಯಾಡಿಯಲ್ಲಿ ಆರ್‌ಟಿಒ ಅಧಿಕಾರಿಗಳು ವಾಹನವನ್ನು ತಡೆದು ನಿಲ್ಲಿಸಿದರು. ಅದರ ಚಾಲಕನನ್ನು ತಮ್ಮ ಜೀಪಿನ ಬಳಿಗೆ ಕರೆಸಿಕೊಂಡು ದಾಖಲೆಗಳನ್ನು ಕೇಳುತ್ತಿದ್ದರು. ಸುಮಾರು ಅರ್ಧ ತಾಸಾದರೂ ಅಧಿಕಾರಿ ಸ್ಕೂಲ್ ಬಸ್ ಚಾಲಕನನ್ನು ವಿಚಾರಣೆ ನಡೆಸುತ್ತಲೇ ಇದ್ದರು. ಇತ್ತ ಸ್ಕೂಲ್ ಬಸ್ಸಿನಲ್ಲಿದ್ದ ಕೆಲವು ಚಿಕ್ಕ ಮಕ್ಕಳು ಮನೆಗೆ ಹೋಗುವುದು ತಡವಾಯಿತೆಂದು ಅಳಲಾರಂಭಿಸಿದರು.

ಇದನ್ನು ಗಮನಿಸಿದ ಸ್ಥಳೀಯರು ಆರ್‌ಟಿಒ ಬಳಿ ಹೋಗಿ ‘ಚಾಲಕನನ್ನು ವಿಚಾರಣೆ ಮಾಡುವ ನೆಪದಲ್ಲಿ ಚಿಕ್ಕ ಮಕ್ಕಳನ್ನು ರಸ್ತೆ ಬದಿಯಲ್ಲಿ ಯಾಕೆ ಕಾಯುವಂತೆ ಮಾಡುತ್ತಿದ್ದೀರಿ? ಅವರು ಮನೆಗೆ ಹೋಗುವುದು ಬೇಡವೆ? ಮಕ್ಕಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಅಧಿಕಾರ ನಿಮಗಿದೆಯೆ?’ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಇದರಿಂದ ತಬ್ಬಿಬ್ಬಾದ ಅಧಿಕಾರಿ ಕೂಡಲೇ ಸ್ಕೂಲ್ ಬಸ್ ಚಾಲಕನ ವಿಚಾರಣೆಯನ್ನು ಅರ್ಧದಲ್ಲಿ ನಿಲ್ಲಿಸಿ ಕಳುಹಿಸಿಕೊಟ್ಟರು. ಸ್ಕೂಲ್ ಬಸ್ಸನ್ನು ಒಂದು ತಿಂಗಳ ಹಿಂದಷ್ಟೆ ಖರೀದಿಸಲಾಗಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net