ವಿಜಯವಾಣಿ ಸುದ್ದಿಜಾಲ ಉಡುಪಿ/ಮಂಗಳೂರು
ಅತ್ಯಂತ ದಹನಕಾರಿ ತೈಲ ಹಾಗೂ ವಸ್ತುವನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಹಡಗಿಗೆ ಗೋವಾ-ಕಾರವಾರ ನಡುವೆ ಅರಬ್ಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಇದೀಗ ಅಪಾಯಕಾರಿ ಸ್ಥಿತಿಯಲ್ಲಿರುವ ಈ ಹಡಗನ್ನು ಸುರತ್ಕಲ್‌ನಿಂದ 33 ನಾಟಿಕಲ್ ಮೈಲು ದೂರ(ಕುಂದಾಪುರ)ದಲ್ಲಿ ಲಂಗರು ಹಾಕಲಾಗಿದೆ.
ಪನಾಮಾ ದೇಶದ ಫ್ಲಾೃಗ್ ಹೊಂದಿರುವ ‘ಎಂವಿ ವಾರ್ಸ್ಕ್ ಫ್ರಾಂಕ್‌ಫರ್ಟ್ ಕಾರ್ಗೋ ಕಂಟೇನರ್’ ಹಡಗು ತೈಲ ಹಾಗೂ ದಹನಕಾರಿ ವಸ್ತುಗಳನ್ನು ಹೇರಿಕೊಂಡು ಮುಂದ್ರಾ ಬಂದರಿನಿಂದ ಹೊರಟಿದ್ದು, ಗೋವಾದಿಂದ ಕಾರವಾರದತ್ತ ಬರುತ್ತಿದ್ದಾಗ ಜುಲೈ 19ರಂದು ಬೆಂಕಿ ಕಾಣಿಸಿಕೊಂಡಿತ್ತು. ಮಾಹಿತಿ ಸಿಕ್ಕಿದ ತಕ್ಷಣ ಇಂಡಿಯನ್ ಕೋಸ್ಟ್‌ಗಾರ್ಡ್(ಐಸಿಜಿ) ಬೆಂಕಿ ನಂದಿಸಲು ರಕ್ಷಣಾ ಹಡಗು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿ ಸತತ 40 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿಯಿದ್ದು, ಒಬ್ಬ ದುರಂತದಲ್ಲಿ ಮೃತಪಟ್ಟಿರುವ ಅಥವಾ ಕಣ್ಮರೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಬೆಂಕಿ ಹತ್ತಿಕೊಳ್ಳಲು ಕಾರಣ, ಅದನ್ನು ಮುಂದೆ ಕೊಂಡೊಯ್ಯಲು ಸಾಧ್ಯವೇ, ಮತ್ತೆ ಇಂಜಿನ್ ಸ್ಟಾರ್ಟ್ ಮಾಡಿದರೆ ಅಪಾಯವಿದೆಯೇ ಎಂಬ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ತಂಡವೊಂದು ಶುಕ್ರವಾರ ಸಂಜೆ ಭೇಡಿ ನೀಡಿದೆ. ಸದ್ಯ ಕರಾವಳಿ ಕಾವಲುಪಡೆ ಸಿಬ್ಬಂದಿ ಹಡಗಿನ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮ
ಒಂದೊಮ್ಮೆ ಹಡಗು ಬೆಂಕಿಯಿಂದ ಪೂರ್ಣ ಸುಟ್ಟು ಹೋದಲ್ಲಿ ಅಥವಾ ಸಮುದ್ರದಲ್ಲಿ ಮುಳುಗಿದರೆ ಅದರೊಳಗಿನ ವಿಷ ಪದಾರ್ಥಗಳು ಸಮುದ್ರತೀರ ಪ್ರದೇಶದ ಮರಳಿನಲ್ಲಿ ಶೇಖರಣೆ ಆಗಬಹುದು. ಅದನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮಾನವ ಪ್ರಯತ್ನದಿಂದ ಶೇಖರಿಸಬಹುದು ಎಂದು ಇಸಿಜಿಎಸ್ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳಲು ಡಿಸಿ ನಿರ್ದೇಶನ
ಬೆಂಕಿಗೆ ತುತ್ತಾದ ಹಡಗಿನಲ್ಲಿ ಪರಿಸರಕ್ಕೆ ಹಾನಿಯಾಗಬಲ್ಲ ಐಎಂಡಿಜಿ, ಸಿಎಟಿ-4 ದ್ರಾವಣ ಇದೆ. ಒಂದೊಮ್ಮೆ ಹಡಗಿನಿಂದ ತೈಲ ಸೋರಿಕೆ ಆದಲ್ಲಿ ಕರ್ನಾಟಕ ಕರಾವಳಿಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಕರಾವಳಿ ಕಾವಲುಪಡೆ, ಕರಾವಳಿ ನಿಯಂತ್ರಣ ವಲಯ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಂದರು ಮತ್ತು ಮೀನುಗಾರಿಕಾ ಇಲಾಖೆಗೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.
ಪ್ರಸ್ತುತ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ವಿವಿಧ ನೈಸರ್ಗಿಕ ವಿಕೋಪ ಉಂಟಾಗುತ್ತಿರುವ ಸಂದರ್ಭದಲ್ಲೇ ಹಡಗು ದುರಂತವೂ ನಡೆದಿದೆ. ನಮ್ಮ ಕರಾವಳಿ ಪ್ರದೇಶ ರಕ್ಷಿಸಲು ಎಲ್ಲ ಕ್ರಮ ಕೈಗೊಳ್ಳುವಂತೆ ಹಾಗೂ ಸೂಕ್ತ ಏಜೆನ್ಸಿ ಅಥವಾ ಸಂಸ್ಥೆಯಿಂದ ಹಣಕಾಸು ವೆಚ್ಚ ಭರಿಸಿಕೊಳ್ಳಲು ಕ್ರಮ ವಹಿಸುವಂತೆ ಕೋಸ್ಟ್‌ಗಾರ್ಡ್ ಅಧಿಕಾರಿಗೆ ಸೂಚಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಆಯಾ ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ಬೆಂಬಲ ನೀಡಲು ಸಿದ್ಧವಾಗಿದೆ. ಸಾಕಷ್ಟು ಮಾನವ ಸಂಪನ್ಮೂಲದೊಂದಿಗೆ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಅಗತ್ಯ ಸಲಕರಣೆಯೊಂದಿಗೆ ತಂಡ ಸನ್ನದ್ಧವಾಗಿರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸದ್ಯಕ್ಕೆ ಈ ಹಡಗು ಅರಬ್ಬಿ ಸಮುದ್ರದಲ್ಲಿ ನಿಂತಿದೆ. ಸದ್ಯಕ್ಕೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದರೂ, ಮತ್ತೊಮ್ಮೆ ಬೆಂಕಿ ಕಾಣಿಸಿಕೊಳ್ಳುವ, ಇದರಿಂದ ಹಡಗು ಸಂಪೂರ್ಣ ಹಾನಿಗೊಂಡು ಮುಳುಗುವ ಹಾಗೂ ಅದರಲ್ಲಿರುವ ತೈಲ ಸೋರಿಕೆಯಾಗಿ ಸಮುದ್ರ ಸೇರುವ ಅಪಾಯ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಉಡುಪಿ ಹಾಗೂ ದ.ಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ.
-ಮಿಥುನ್ ಎಚ್.ಎನ್, ಎಸ್‌ಪಿ, ಕರಾವಳಿ ಕಾವಲು ಪಡೆ