20 ಎಳೆಯ ಕರುಗಳ ಸಾವಿಗೆ ಕಾರಣರಾಗಿದ್ದ ದುಷ್ಕರ್ಮಿಗಳು ಪೊಲೀಸರ ವಶಕ್ಕೆ

belur
Published on

ಹಾಸನ : ಎಳೆಯ ಕರುಗಳನ್ನು ಅಕ್ರಮವಾಗಿ ಸಾಗಿಸುವ ಸಮಯದಲ್ಲಿ ಅಪಘಾತವಾಗಿ 20 ಎಳೆಯ ಕರುಗಳು ಮರಣ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್ ಮತ್ತು ಪುರುಷೋತ್ತಮ್ ಎಂಬುವರು ಬಂಧಿತರು.

ಆಗಸ್ಟ್ 19 ರ ರಾತ್ರಿ, ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ, ಗೂಡ್ಸ್ ವಾಹನದಲ್ಲಿ 50 ಕ್ಕೂ ಹೆಚ್ಚು ಕರುಗಳನ್ನು ಸಾಗಾಟ ಮಾಡುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿತ್ತು. ಈ ಅಪಘಾತದಿಂದಾಗಿ ಕರುಗಳ ಬಾಯಿ, ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಗೋಹತ್ಯೆ ನಿಷೇಧ ಇರುವುದರಿಂದ ರಾತ್ರೋರಾತ್ರಿ ಕರುಗಳನ್ನು ಸಾಗಿಸುತ್ತಿದ್ದ ದುಷ್ಟರು ಅಪಘಾತ ಸ್ಥಳದಿಂದ ಪಲಾಯನ ಮಾಡಿದ್ದರು.

ಈ ದುರ್ಘಟನೆಯಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಪ್ರಕರಣದ ಬಗ್ಗೆ ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ದುರ್ಘಟನೆಯ ನಂತರ ಬದುಕುಳಿದಿದ್ದ 30ಕ್ಕೂ ಹೆಚ್ಚು ಕರುಗಳನ್ನು ಪಶು ಇಲಾಖೆ ಅಧಿಕಾರಿಗಳು ಗೋಶಾಲೆಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net