ನವದೆಹಲಿ: ವಿವಾಹಿತ ಮಹಿಳೆಯರು ಸ್ವಾರ್ಥಕ್ಕಾಗಿ ಪತಿ ಮತ್ತು ಅತ್ತೆ-ಮಾವಂದಿರಿಗೆ ಕಿರುಕುಳ ನೀಡಲು ಕೌಟುಂಬಿಕ ದೌರ್ಜನ್ಯ ಕಾನೂನನ್ನು ದುರುಪಯೋಗಪಡಿಸಿ ಕೊಳ್ಳುತ್ತಿ ರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
34 ವರ್ಷದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ಗೆ ನ್ಯಾಯ ಸಿಗಬೇಕು ಎಂಬ ಸಾಮಾಜಿಕ ಒತ್ತಾಯ ಹೆಚ್ಚುತ್ತಿರುವ ಮಧ್ಯೆ ಸುಪ್ರೀಂಕೋರ್ಟ್ ಈ ಅನಿಸಿಕೆ ಹೊರಹಾಕಿದೆ. ತನ್ನ ವಿರುದ್ಧ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಕೇಸುಗಳನ್ನು ದಾಖಲಿಸಿ, ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದರು ಎಂದು ಆರೋಪಿಸಿ ಸುಭಾಷ್ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ದಾರಾ ಲಕ್ಷ್ಮಿ ನಾರಾಯಣ, ಇತರರು ವರ್ಸಸ್ ತೆಲಂಗಾಣ ಸರ್ಕಾರದ ನಡುವಿನ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ಪತ್ನಿ ವಿರುದ್ಧ ಪತಿ ಮತ್ತು ಕುಟುಂಬಸ್ಥರ ಕ್ರೌರ್ಯಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇದನ್ನು ವಿವಾಹಿತ ಮಹಿಳೆಯರು ಬಹುವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ.
ಮನೆಯಲ್ಲಿನ ಹಿಂಸಾಚಾರ ಮತ್ತು ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸುವ ಉದ್ದೇಶದಿಂದ ಕಾನೂನು ಮಾಡಲಾಗಿದೆ. ಆದರೆ, ಪತಿ ಮತ್ತವರ ಕುಟುಂಬದವರು ತಮ್ಮ ಭಾರೀ ಬೇಡಿಕೆಗಳನ್ನು ಈಡೇರಿಸದಿದ್ದಾಗ ಕಾನೂನಿನ ನಿಬಂಧನೆಗಳನ್ನು ಕೆಲವು ಮಹಿಳೆಯರು ದುರ್ಬಳಕೆ ಮಾಡುತ್ತಾರೆ. ಈ ಪ್ರವೃತ್ತಿ ಹೆಚ್ಚುತ್ತಿರುವುದು ವಿಪರ್ಯಾಸ ಎಂದು ನ್ಯಾ. ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಪೀಠ ಅಸಮಾಧಾನ ಹೊರಹಾಕಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶಾದ್ಯಂತ ವೈವಾಹಿಕ ವಿವಾದಗಳು ಗಮನಾರ್ಹವಾಗಿ ಏರಿಕೆಯಾಗಿವೆ. ವಿವಾಹ ಸಂಬಂಧದ ಮಧ್ಯೆ ಬೆಳೆಯುತ್ತಿರುವ ಅಪಶ್ರುತಿ ಮತ್ತು ಉದ್ವಿಗ್ನತೆ ಪರಿಣಾಮವಾಗಿ ಸೆಕ್ಷನ್ 498ಎಯಂತಹ ನಿಬಂಧನೆಗಳು ದುರುಪಯೋಗವಾಗುತ್ತಿವೆ ಎಂದು ನ್ಯಾಯಾಲಯ ಗಮನಿಸಿದೆ. ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಪತಿ, ಆತನ ಪೋಷಕರು ಮತ್ತು ಕುಟುಂಬ ಸದಸ್ಯರ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿದ ತೆಲಂಗಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.
ಎಫ್ಐಆರ್ನ್ನು ಪರಿಶೀಲಿಸಿದಾಗ ಪತ್ನಿಯ ಆರೋಪ ಗಳು ಅಸ್ಪಷ್ಟ ಮತ್ತು ದುರುದ್ದೇಶಪೂರಿತ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕೆಲವು ವ್ಯಕ್ತಿಗಳನ್ನು ಇಲ್ಲಿ ವಿನಾಕಾರಣ ಆರೋಪಿಗಳನ್ನಾಗಿ ಮಾಡಲಾಗಿದ್ದು, ಸ್ಪಷ್ಟ ಸಮರ್ಥನೆಯಿಲ್ಲದೆ ಅಪರಾಧದ ಜಾಲಕ್ಕೆ ಎಳೆಯಲಾಗಿದೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.
ವೈವಾಹಿಕ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ಕಲಹಗಳು ಉಂಟಾದಾಗ ಗಂಡನ ಕುಟುಂಬದ ಎಲ್ಲಾ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡುವಂತಹ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುವುದು ನಮ್ಮ ನ್ಯಾಯಾಂಗದ ಅನುಭವದಿಂದ ಕಂಡುಕೊಂಡ ಸತ್ಯ ಎಂಬುದಾಗಿಯೂ ನ್ಯಾಯಾಲಯ ಹೇಳಿದೆ.
ಎಲ್ಲಾ ನೋವನ್ನೂ ತಾನೇ ಅನುಭವಿಸಿದ: ಅತುಲ್ ಸುಭಾಷ್ ತನ್ನ ಪತ್ನಿ ನಿಕಿತಾ ಸಿಂಘಾನಿಯ ಮತ್ತು ಕುಟುಂಬದ ಸುಲಿಗೆ ಮತ್ತು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿರುವ ಹೆತ್ತವರು, ಆತ ತೀವ್ರ ಒತ್ತಡದಲ್ಲಿದ್ದ. ಕೋರ್ಟ್ ಕೇಸುಗಳಿಗಾಗಿ ಆತ ಉತ್ತರ ಪ್ರದೇಶದ ಜೌನ್ಪುರ ಮತ್ತು ಕರ್ನಾಟಕ ಬೆಂಗಳೂರು ನಡುವೆ ಕನಿಷ್ಠ 40 ಬಾರಿ ಪ್ರಯಾಣ ಮಾಡಿದ್ದಾನೆ ಎಂದು ಬೇಸರ ಹೊರಹಾಕಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟರು. ನಮಗೂ ಚಿತ್ರಹಿಂಸೆ ನೀಡಿದರು. ಆದರೆ ಮಗ ಎಲ್ಲವನ್ನೂ ತಾನೇ ಅನುಭವಿಸಿಕೊಂಡ, ಸಹಿಸಿಕೊಂಡ. ನಮಗೆ ಕಷ್ಟ ಆಗದಂತೆ ಎಚ್ಚರವಹಿಸುತ್ತಿದ್ದ. ಒಳಗೊಳಗೇ ಆತ ನೋವು ಪಡುತ್ತಿದ್ದುದು ನಮಗೆ ಗೊತ್ತಾಗುತ್ತಿತ್ತು ಎಂದು ಮಗನ ಸಾವಿನಿಂದ ತತ್ತರಿಸಿರುವ ತಾಯಿ ಹೇಳಿದ್ದಾರೆ. ಕೌಟುಂಬಿಕ ನ್ಯಾಯಾಲಯ ಕಾನೂನನ್ನು ಪಾಲಿಸಲಿಲ್ಲ ಎಂದು ಅತುಲ್ ಹೇಳುತ್ತಿದ್ದ. ಬೆಂಗಳೂರು ಮತ್ತು ಜೌನ್ಪುರ ನಡುವೆ 40 ಬಾರಿ ಓಡಾಡಿದ್ದಾನೆ. ಹತ್ತಾರು ಆರೋಪಗಳನ್ನು ಎದುರಿಸಿದ್ದ ಎಂದು ತಂದೆ ಹೇಳಿದ್ದಾರೆ.
ಕುಟುಂಬಸ್ಥರ ವಿರುದ್ಧ ಎಫ್ಐಆರ್: ಪತ್ನಿ, ಆಕೆಯ ಕುಟುಂಬದ ಕಿರುಕುಳದಿಂದಲೇ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರಿನ ವೈಟ್ಫೀಲ್ಡ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಿವಕುಮಾರ್ ಹೇಳಿದ್ದಾರೆ. ಡಿ. 9ರಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಬೆಂಗಳೂರಿನ ಮಾರತ್ತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ಅವರ ವಿರುದ್ಧ ಹಲವಾರು ಪ್ರಕರಣಗಳು ನಡೆಯುತ್ತಿವೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಕೇಸುಗಳನ್ನು ಇತ್ಯರ್ಥಪಡಿಸಲು ಆತನ ಪತ್ನಿ, ಕುಟುಂಬಸ್ಥರು ಹಣಕ್ಕೆ ಬೇಡಿಕೆಯಿಟ್ಟು, ಕಿರುಕುಳ ನೀಡಿದ್ದರು. ಹೀಗಾಗಿ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕಾಯ್ದೆ ಪರಿಶೀಲಿಸುವ ಸಮಯ ಬಂದಿದೆ: ಕೌಟುಂಬಿಕ ಮತ್ತು ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಿಂಗ- ತಟಸ್ಥ (ಜೆಂಡರ್ ನ್ಯುಟ್ರಾಲಿಟಿ) ನಿಯಮ ಜಾರಿಗೆ ತರಬೇಕಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಕುಟುಂಬ ದೌರ್ಜನ್ಯ ಪ್ರಕರಣದಲ್ಲಿ ಎರಡೂ ಪಾಲುದಾರರನ್ನು ರಕ್ಷಿಸಬೇಕು. ಕುಟುಂಬ ಸಂಬಂಧಿತ ಕಾಯ್ದೆಗಳನ್ನು ಪರಿಶೀಲಿಸುವ ಸಮಯ ಬಂದಿದೆ. ಸಮಾಜದಲ್ಲಿ ಕುಟುಂಬವು ಬಹಳ ಮುಖ್ಯ ಅಂಶವಾಗಿದೆ. ಒಬ್ಬ ಪಾಲುದಾರನು ದುರುಪಯೋಗಪಡಿಸಿಕೊಳ್ಳಬಹುದಾದ ಕಾನೂನುಗಳು ಇಡೀ ಕುಟುಂಬಕ್ಕೆ ಹಾನಿ ಉಂಟುಮಾಡಬಹುದು. ಇದನ್ನು ಪರಿಹರಿಸದಿದ್ದರೆ ಗಂಭೀರ ಸಾಮಾಜಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೃದಯವಿದ್ರಾವಕ ಎಂದ ಸಂಸದೆ ಕಂಗನಾ ರಣಾವತ್: ವಿಚ್ಛೇದಿತ ಪತ್ನಿಯ ಕಿರುಕುಳವನ್ನು ವಿವರಿಸುವ ಟೆಕ್ಕಿ ಅತುಲ್ ಸುಭಾಷ್ ಅವರ ವೀಡಿಯೊ ಹೃದಯವಿದ್ರಾವಕವಾಗಿದೆ. ಇಡೀ ದೇಶವೇ ಆಘಾತಕ್ಕೊಳಗಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ವಿಚ್ಛೇದಿತ ಪತಿಯ ಆರ್ಥಿಕ ಸಾಮರ್ಥ್ಯಕ್ಕಿಂತಲೂ ಬಹಳ ಹೆಚ್ಚಿನ ಪ್ರಮಾಣದಲ್ಲಿ, ಕೋಟ್ಯಂತರ ರೂಪಾಯಿ ವರೆಗೂ ಸುಲಿಗೆ ಮಾಡಲಾಗಿದೆ. ಆ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡರು. ಆದರೆ, ಒಬ್ಬ ಮಹಿಳೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಪ್ರತಿದಿನ ಕಿರುಕುಳಕ್ಕೊಳಗಾಗುವ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ವಿವಾಹ ಪ್ರಕರಣಗಳಲ್ಲಿ ಪುರುಷರೇ ತಪ್ಪು ಮಾಡುತ್ತಾರೆ. ಎಲ್ಲಿಯವರೆಗೆ ಮದುವೆಗಳು ಸಂಪ್ರದಾಯಗಳಿಗೆ ಬದ್ಧವಾಗಿರುತ್ತವೆಯೋ ಅಲ್ಲಿಯವರೆಗೆ ಅವು ಉತ್ತಮವಾಗಿ ನಡೆಯುತ್ತವೆ. ಇತ್ತೀಚೆಗೆ ಸಮಾಜವಾದ, ಕಮ್ಯುನಿಸಂನಿಂದ ಇದು ಭ್ರಷ್ಟಗೊಂಡಿದೆ ಎಂದು ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಈತನಿಗೆ ಅವಕಾಶ ಕೊಡಬೇಡಿ; Team ಇಂಡಿಯಾಗೆ ಸಲಹೆ ನೀಡಿದ ಖ್ಯಾತ ಕ್ರಿಕೆಟಿಗ
ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್ ಆಗುತ್ತಿದೆ ಶೇಖಾವತ್ ರೀ ಎಂಟ್ರಿ ವಿಡಿಯೋ