

ಬಿಗ್ ಬಿ ಅಮಿತಾಭ್ ಬಚ್ಚನ್ ಮಗನೆಂಬ ಮಾತ್ರಕ್ಕೆ ಅಭಿಷೇಕ್ಗೆ ಚಿತ್ರರಂಗದಲ್ಲಿ ಎಲ್ಲವೂ ಸಲೀಸಾಗಿ ಸಿಕ್ಕಿತು ಎಂದು ಹೇಳುವುದು ಕಷ್ಟ. 20 ವರ್ಷಗಳ ಹಿಂದೆ ಅಭಿಷೇಕ್ ಚಿತ್ರರಂಗಕ್ಕೆ ಬರುವುದಕ್ಕೂ ಕಷ್ಟಪಟ್ಟರು, ಈಗಲೂ ಕಷ್ಟಪಡುತ್ತಿದ್ದಾರೆ ಎಂದರೆ, ಅದರಲ್ಲಿ ಸುಳ್ಳೇನಿಲ್ಲ. ಚಿತ್ರರಂಗಕ್ಕೆ ಬಂದು 20 ವರ್ಷಗಳಾದರೂ, ಅಭಿಷೇಕ್ ಕೈಯಲ್ಲಿ ಅಷ್ಟೇನೂ ದೊಡ್ಡ ಚಿತ್ರಗಳಿಲ್ಲ. ಹಾಗೆಯೇ ಚಿತ್ರರಂಗದಲ್ಲಿ ಅವರು ಬೇಡಿಕೆಯ ನಟರಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ಕಾರಣ, ಚಿತ್ರಗಳ ಸೋಲು. ಅಭಿಷೇಕ್ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ಮಾಡಿದರೂ, ದೊಡ್ಡದೊಡ್ಡ ನಿರ್ದೇಶಕರ ಜತೆಗೆ ಕೆಲಸ ಮಾಡಿದರೂ, ಅವರ ಚಿತ್ರಗಳ್ಯಾವುವೂ ಬ್ಲಾಕ್ಬಸ್ಟರ್ಗಳಾಗಲೇ ಇಲ್ಲ. ಅದೇ ಕಾರಣಕ್ಕೆ ಅಭಿಷೇಕ್, ಈಗಲೂ ಒದ್ದಾಡುತ್ತಲೇ ಇದ್ದಾರೆ. ಆ ಸೋಲಿಗೆ ನೇರವಾಗಿ ಪುತ್ರಿ ಆರಾಧ್ಯಾ ಕಾರಣ ಎಂದೂ ಅವರು ಹೇಳುತ್ತಾರೆ.
ಹೌದು, ನಿಜಕ್ಕೂ ಇದು ಶಾಕಿಂಗ್ ವಿಚಾರ. ಆದರೆ, ಕರಿಯರ್ನ ಸೋಲನ್ನು ಮಗಳ ಮೇಲೆ ಹೊರಿಸುವುದಕ್ಕೆ ಯಾವುದೇ ಬೇಸರ ಅವರಿಗಿಲ್ಲವಂತೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಅದನ್ನು ಇತ್ತೀಚೆಗಷ್ಟೇ ಅಭಿಷೇಕ್ ಬಹಿರಂಗವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ನನ್ನ ಸಿನಿಮಾ ಕರಿಯರ್ನಲ್ಲಿ ನಾನು ಇಲ್ಲಿಯವರೆಗೂ ಇಂಟಿಮೆಷನ್ ಸೀನ್ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅದು ನನ್ನ ಸಿನಿಮಾ ಜೀವನದ ಪಾಲಿಸಿ. ನನಗೆ ನಾನೇ ಹಾಕಿಕೊಂಡ ಆ ನೀತಿಯೇ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಒಂದಷ್ಟು ಸಿನಿಮಾಗಳನ್ನು ಕೈಬಿಡಲು ಅದರಲ್ಲಿನ ಅಶ್ಲೀಲತೆ ಕಾರಣವಾಗಿತ್ತು. ಆ ಥರಹದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ನನ್ನ ಪುತ್ರಿ ಆರಾಧ್ಯಾ ಅಂಥ ದೃಶ್ಯಗಳನ್ನು ನೋಡಿ ಮುಜುಗರಕ್ಕೊಳಪಡುತ್ತಾಳೆ. ಅವಳನ್ನು ಗಮನದಲ್ಲಿಟ್ಟುಕೊಂಡೇ ನಾನು ಸಿನಿಮಾ ಆಯ್ದುಕೊಳ್ಳುತ್ತೇನೆ. ಮುಜುಗರಪಡುವ ದೃಶ್ಯಗಳು ತೆರೆಮೇಲೆ ಕಂಡರೆ ಇಲ್ಲೇನು ನಡೆಯುತ್ತಿದೆ ಎಂದೂ ಆರಾಧ್ಯಾ ಕೇಳುತ್ತಾಳೆ’ ಎನ್ನುತ್ತಾರೆ ಅಭಿಷೇಕ್.
ಹತ್ತಾರು ಬಗೆಯ ಸಿನಿಮಾಗಳನ್ನು ಅಭಿಷೇಕ್ ಕೇಳಿದ್ದಾರೆ. ಅವುಗಳಲ್ಲಿ ಹೆಚ್ಚು ಆಪ್ತತೆ ಇರುವ ದೃಶ್ಯಗಳನ್ನು ತೆಗೆಯಲು ಅವಕಾಶ ಇದೆಯಾ ಎಂದು ಕೇಳಿದ್ದರು. ಆದರೆ, ಅದು ಅಸಾಧ್ಯವಾಗದಿದ್ದಾಗ ಆ ಸಿನಿಮಾಗಳಿಂದ ಹೊರಬಂದಿದ್ದರು ಅಭಿಷೇಕ್. ಆದರೆ, ಇದ್ಯಾವುದರಿಂದ ಅವರು ಒಮ್ಮೆಯೂ ಬೇಸರಿಸಿಕೊಂಡಿಲ್ಲವಂತೆ. ‘ಹೌದು, ನಾನು ಆರಾಮವಾಗಿದ್ದೇನೆ. ಸಿನಿಮಾ ಇಲ್ಲ ಎಂದ ತಕ್ಷಣ ಅದರಿಂದ ನನಗೇನು ಬೇಸರ ಇಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ಅದರಲ್ಲಿಯೇ ನಾನು ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ. ಸದ್ಯ ಬ್ರೀಥ್ ಅನ್ನೋ ವೆಬ್ ಸಿರೀಸ್ನಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ (ಏಜೆನ್ಸೀಸ್)