'ಕಿಂಗ್'​ ಕೊಹ್ಲಿ ಕುರಿತು ಟೀಕೆ! ಆಪ್ತ ಸ್ನೇಹಿತನ ಪರ ಧ್ವನಿ ಎತ್ತಿದ ಎಬಿಡಿ, ದಿಗ್ಗಜರಿಗೆ ಖಡಕ್ ತಿರುಗೇಟು​ | Virat Kohli

ವಿಜಯವಾಣಿ - 2025-05-06T173945.476
Published on

Virat Kohli: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಅದ್ಭುತ ಆಲ್​ರೌಂಡ್ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಆಡಿರುವ 11 ಪಂದ್ಯಗಳಲ್ಲಿ 8 ಗೆದ್ದು ಮೂರರಲ್ಲಿ ಸೋಲು ಕಂಡಿದೆ. ಸರಣಿ ಗೆಲುವುಗಳನ್ನು ನೋಡಿರುವ ಆರ್​ಸಿಬಿಗೆ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್​ ಪ್ರದರ್ಶನ ತಂಡದಲ್ಲಿ ಹಾಗೂ ಅಭಿಮಾನಿಗಳಲ್ಲಿ ಟ್ರೋಫಿ ಗೆಲುವಿನ ಉತ್ಸಾಹವನ್ನು ಮೂಡಿಸಿದೆ.

ಒಂದು ಪಂದ್ಯ ಹೊರತುಪಡಿಸಿ, ಉಳಿದೆಲ್ಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿರುವ ವಿರಾಟ್​, ಪ್ರಸ್ತುತ ಐಪಿಎಲ್​ 18ನೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಆಟಗಾರರಾಗಿ ಆರೆಂಜ್​ ಕ್ಯಾಪ್​ ತೊಟ್ಟು, ಮೈದಾನದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬ್ಯಾಟಿಂಗ್​ನಲ್ಲಿ ಸ್ಥಿರತೆ ಕಾಪಾಡಿಕೊಂಡು ಬಂದಿರುವ ಕೊಹ್ಲಿ, ಇತರರಿಗೂ ಮಾದರಿಯಾಗುವಂತೆ ಆಟವನ್ನು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆಯೂ ಟೀಕೆ, ವ್ಯಂಗ್ಯಗಳು ಮಾತ್ರ ಅವರನ್ನು ಬಿಟ್ಟಿಲ್ಲ.

ಅತ್ಯಧಿಕ ರನ್​ ಗಳಿಸಿ, ತಂಡವನ್ನು ಪ್ಲೇಆಫ್​ನತ್ತ ಕರೆದೊಯ್ಯಲು ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದೇ ಆದರೂ ಮಾಜಿ ಹಿರಿಯ ಆಟಗಾರರು, ದಿಗ್ಗಜರು ವಿರಾಟ್ ಕೊಹ್ಲಿ ಅವರ ಸ್ಟ್ರೈಕ್​ ರೇಟ್​ ಟೀಕಿಸಿದ್ದಾರೆ. ಸಂಜಯ್ ಮಂಜ್ರೇಕರ್, ವೀರೇಂದ್ರ ಸೆಹ್ವಾಗ್ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಕೊಹ್ಲಿ ಮಿಡೆಲ್​ ಓವರ್​ಗಳಲ್ಲಿ ಅಧಿಕ ರನ್ ಗಳಿಸುವ ವೇಗದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಸ್ಟ್ರೈಕ್​ ರೇಟ್​ ಕುರಿತಾದ ಟೀಕೆಗಳು ಈ ಸೀಸನ್​ ಮಾತ್ರವಲ್ಲದೆ, ಕಳೆದ ಎರಡು ಸೀಸನ್​ನಿಂದಲೂ ಕೇಳಿಬಂದಿವೆ.

ತನ್ನ ಆಪ್ತ ಸ್ನೇಹಿತನ ಬಗ್ಗೆ ಟೀಕಿಸುವ ಮಾಜಿ ಕ್ರಿಕೆಟಿಗರ ಬಾಯಿ ಮುಚ್ಚಿಸಲು ಖುದ್ದು ತಾವೇ ಮುಂದಾದ ಮಾಜಿ ಆರ್​ಸಿಬಿ ಬ್ಯಾಟರ್​ ಎಬಿ ಡಿವಿಲಿಯರ್ಸ್​, "ಆರ್​ಸಿಬಿಯಲ್ಲಿ ವಿರಾಟ್​ ಸದಾ ಇರುವಂತ ಒಬ್ಬ ಆಟಗಾರ. ತಂಡದಲ್ಲಿ ಅವರಿದ್ದಾರೆ ಎಂದರೆ ಅಲ್ಲಿ ಭಯಕ್ಕೆ ಜಾಗವಿಲ್ಲ. ಆತ ಆರ್​ಸಿಬಿಗೆ ಮಿಸ್ಟರ್ ಸೇಫ್ಟಿ. ನಾನು ನೋಡಿದಂತೆ ಯಾವುದು ಬದಲಾಗಿಲ್ಲ. ಇಲ್ಲಿ ಕೆಲವರಿಗೆ ಹೇಳಬೇಕು, ನನಗೆ ಆನೆಯ ಮಿದುಳಿದೆ. ವಿರಾಟ್​ ಮಂದಗತಿಯ ಬ್ಯಾಟಿಂಗ್ ಮಾಡ್ತಾರೆ, ಸ್ಟ್ರೈಕ್​ ರೇಟ್​ ಸ್ಲೋ ಎನ್ನುತ್ತೀರಿ ಅಲ್ವಾ? ಗಮನಿಸಿ ಕಳೆದ ಪಂದ್ಯದಲ್ಲಿ ಅವರು 200 ಸ್ಟ್ರೈಕ್​ ರೇಟ್​ ಸಮೀಪದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ನಿಮಗೆ ನೆನಪಿರಲಿ, ಈಗ ನೀವು ಹೇಳಿದ್ದನ್ನು ನೀವೇ ತಿನ್ನಿ" ಎಂದು ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net