

ನವದೆಹಲಿ: ಮಾರಕ ಕರೊನಾ ವೈರಸ್ ಕುರಿತು ಭಾರತೀಯರಿಗೆ ಹಿಂದಿಯಲ್ಲೇ ಟ್ವೀಟ್ ಮಾಡಿ ಜಾಗೃತಿ ಮೂಡಿಸಿದ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೀಟರ್ಸನ್ ಸಹ ಪ್ರಧಾನಿಯನ್ನು ಮೆಚ್ಚಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಕರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಭಾರತೀಯರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಪೀಟರ್ಸನ್, ನಮಸ್ತೆ ಭಾರತ. ಎಲ್ಲರೂ ಸ್ವಯಂ ಏಕಾಂತದಲ್ಲಿ ಉಳಿದುಕೊಂಡು, ಸರ್ಕಾರ ಹೇಳಿದ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಒಟ್ಟಾಗಿ ಮಹಾಮಾರಿ ಕರೊನಾ ವಿರುದ್ಧ ಹೋರಾಡಬೇಕು. ಹೀಗಾಗಿ ಕೆಲ ದಿನಗಳಮಟ್ಟಿಗೆ ಮನೆಯಲ್ಲೇ ಇರಿ ಎಂದು ಹಿಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ ಕ್ರಿಕೆಟರ್ ಶ್ರೀವಾತ್ಸವ್ ಗೋಸ್ವಾಮಿ ಅವರನ್ನು ಟ್ಯಾಗ್ ಮಾಡಿ ನನ್ನ ಹಿಂದಿ ಟೀಚರ್ ಎಂದು ಕರೆದಿದ್ದಾರೆ.
ಪೀಟರ್ಸನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಆಂಗ್ಲ ಆಟಗಾರನನ್ನು ಸ್ಪೋಟಕ ಬ್ಯಾಟ್ಸ್ಮನ್ ಎಂದು ಕರೆದಿದ್ದಾರೆ. ಅವರು ಕರೊನಾ ಮಹಾಮಾರಿ ಬಗ್ಗೆ ನಮಗೆ ಏನೋ ಹೇಳುತ್ತಿದ್ದಾರೆ. ನಾವು ಕೂಡ ಒಟ್ಟಾಗಿ ಕರೊನಾ ವಿರುದ್ಧ ಹೋರಾಡೋಣ ಎಂದು ತಿಳಿಸಿದ್ದಾರೆ.
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಪೀಟರ್ಸನ್, ಧನ್ಯವಾದಗಳು ಮಿಸ್ಟರ್ ಮೋದಿ, ನಿಮ್ಮ ನಾಯಕತ್ವವೂ ಕೂಡ ಸ್ಪೋಟಕವಾಗಿದೆ ಎಂದಿದ್ದಾರೆ. ಒಟ್ಟಾರೆ ಪ್ರಧಾನಿ ಮತ್ತು ಪೀಟರ್ಸನ್ ನಡುವಿನ ಸ್ನೇಹಪರ ಚರ್ಚೆ ಜನರಿಗೆ ಹೊಸ ಜಾಗೃತಿ ಸಂದೇಶವನ್ನು ನೀಡಿದೆ.
ಅಂದಹಾಗೆ ಪೀಟರ್ಸನ್ ಮತ್ತು ಕ್ರಿಕೆಟಿಗ ಶ್ರೀವಾತ್ಸವ್ ಗೋಸ್ವಾಮಿ ಅವರು ಈ ಹಿಂದೆ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. (ಏಜೆನ್ಸೀಸ್)