ಫುಟ್​ಬಾಲ್ ದಿಗ್ಗಜ ಪಿಕೆ ಬ್ಯಾನರ್ಜಿ ಇನ್ನಿಲ್ಲ: 1956, 1960ರ ಒಲಿಂಪಿಕ್ಸ್​ನಲ್ಲಿ ಆಡಿದ ತಾರೆ

foot bal 20 mar 20
Published on

ಕೋಲ್ಕತ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ಫುಟ್​ಬಾಲ್ ದಿಗ್ಗಜ ಪ್ರದೀಪ್ ಕುಮಾರ್ (ಪಿಕೆ) ಬ್ಯಾನರ್ಜಿ ಶುಕ್ರವಾರ ನಿಧನ ಹೊಂದಿದರು. ಮೃತರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಶ್ವಾಸಕೋಶ, ರ್ಪಾನ್​ಸನ್, ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು.

ಮಾರ್ಚ್ 2ರಿಂದಲೂ ಸ್ಥಳೀಯ ಆಸ್ಪತ್ರೆಯಲ್ಲಿ ಜೀವರಕ್ಷಕದ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಬ್ಯಾನರ್ಜಿ ಶುಕ್ರವಾರ ಮಧ್ಯಾಹ್ನ 12.40ರ ವೇಳೆಗೆ ಕೊನೆಯುಸಿರೆಳೆದರು. ಮೃತರು ಪುತ್ರಿಯರಾದ ಪೌಲಾ ಹಾಗೂ ಪೂರ್ಣ ಮತ್ತು ಹಾಲಿ ಸಂಸದರಾಗಿರುವ ಕಿರಿಯ ಸಹೋದರ ಪ್ರಸೂನ್ ಬ್ಯಾನರ್ಜಿ ಅವರನ್ನು ಅಗಲಿದ್ದಾರೆ.

ಪಶ್ಚಿಮ ಬಂಗಾಳದ ಜಲ್​ಫೈಗುರಿಯ ಹೊರವಲಯ ಮೊಯ್ನಾ ಗುರಿಯಲ್ಲಿ 1936ರ ಜೂನ್ 23ರಂದು ಪಿಕೆ ಬ್ಯಾನರ್ಜಿ ಜನಿಸಿದ್ದರು. ಬ್ಯಾನರ್ಜಿ ಕುಟುಂಬ ಮೂಲತಃ ಜಮ್ಶೆಡ್​ಪುರ ದವರಾದರೂ ಕೋಲ್ಕತದಲ್ಲಿ ನೆಲೆಸಿತ್ತು. 1962ರ ಏಷ್ಯಾಡ್​ನಲ್ಲಿ ಸ್ವರ್ಣ ಜಯಿಸಿದ ಭಾರತ ತಂಡ ಸದಸ್ಯರಾಗಿದ್ದರು. ಇವರ ಅವಧಿಯಲ್ಲಿ ವಿಶ್ವಮಟ್ಟದಲ್ಲಿ ಭಾರತ ಫುಟ್​ಬಾಲ್ ತಂಡ ಉಚ್ಚಾ ್ರು ಸ್ಥಿತಿಯಲ್ಲಿತ್ತು. ರಾಷ್ಟ್ರೀಯ ತಂಡದ ಪರ 84 ಪಂದ್ಯಗಳನ್ನಾಡಿರುವ ಪಿಕೆ ಬ್ಯಾನರ್ಜಿ 65 ಗೋಲು ಸಿಡಿಸಿದ್ದಾರೆ. 2004ರಲ್ಲಿ ಫಿಫಾ ವತಿಯಿಂದ 20ನೇ ಶತಮಾನದ ಭಾರತದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಪಿಕೆ ಬ್ಯಾನರ್ಜಿ 1952ರಲ್ಲಿ 16ನೇ ವಯಸ್ಸಿನಲ್ಲೇ ಬಿಹಾರ ಪರ ಸಂತೋಷ್ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು.

2 ಒಲಿಂಪಿಕ್ಸ್, 3 ಏಷ್ಯಾಡ್​ನಲ್ಲಿ ಭಾಗಿ: ಪಿಕೆ ಬ್ಯಾನರ್ಜಿ 2 ಒಲಿಂಪಿಕ್ಸ್ (1956ರ ಮೆಲ್ಬೋರ್ನ್, 1960ರ ರೋಮ್, 3 ಏಷ್ಯಾಡ್​ಗಳಲ್ಲಿ (1958, 62, 66) ಭಾರತ ತಂಡ ಪ್ರತಿನಿಧಿಸಿದ್ದಾರೆ. ಮೆಲ್ಬೋರ್ನ್ ಒಲಿಂಪಿಕ್ಸ್​ನಲ್ಲಿ ಭಾರತ ತಂಡ 4ನೇ ಸ್ಥಾನ ಪಡೆದಿತ್ತು. 1962ರ ಜಕಾರ್ತ ಏಷ್ಯಾಡ್​ನಲ್ಲಿ ಆತಿಥೇಯ ತಂಡವನ್ನೇ ಮಣಿಸಿ ಭಾರತ ಸ್ವರ್ಣ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಬ್ಯಾನರ್ಜಿ ಮೊದಲ ಗೋಲು ಬಾರಿಸಿದ್ದರು. 1962ರ ಏಷ್ಯಾಡ್ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸಿದ ಕೊನೇ ಜೀವಿತ ಸದಸ್ಯರಾಗಿದ್ದರು. ಜತೆಗೆ 1960ರ ರೋಮ್ ಒಲಿಂಪಿಕ್ಸ್​ನಲ್ಲಿ ಭಾರತ ತಂಡ ಮುನ್ನಡೆಸಿದ್ದರು. ಬಳಿಕ ಸತತವಾಗಿ ಗಾಯದ ಸಮಸ್ಯೆಗೆ ಸಿಲುಕಿದ ಪರಿಣಾಮ ಬ್ಯಾನರ್ಜಿ 1967ರಲ್ಲಿ ವೃತ್ತಿಜೀವನದಿಂದ ನಿವೃತ್ತಿ ಹೊಂದಿದರು. 1990ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 1961ರಲ್ಲಿ ಅರ್ಜುನ ಪ್ರಶಸ್ತಿ ಆರಂಭಗೊಂಡಾಗ, ಮೊದಲಿಗೆ ಈ ಗೌರವ ಪಡೆದ ಕ್ರೀಡಾಪಟುಗಳಲ್ಲಿ ಇವರೂ ಸೇರಿದ್ದರು. -ಪಿಟಿಐ/ಏಜೆನ್ಸೀಸ್

54 ಟ್ರೋಫಿಗಳ ಒಡೆಯ

ವೃತ್ತಿಪರ ಫುಟ್​ಬಾಲ್​ನಿಂದ ನಿವೃತ್ತಿ ಹೊಂದಿದ ಬಳಿಕ ಪಿಕೆ ಬ್ಯಾನರ್ಜಿ ಅತ್ಯುತ್ತಮ ಕೋಚ್ ಆಗಿ ಗುರುತಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ವಿವಿಧ ತಂಡಗಳು 54 ಟ್ರೋಫಿ ಜಯಿಸಿರುವುದು ವಿಶೇಷ. ಪ್ರತಿಷ್ಠಿತ ಮೋಹನ್ ಬಗಾನ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವ ಹಿಸಿದ್ದಾರೆ. 1977ರಲ್ಲಿ ನ್ಯೂಯಾರ್ಕ್ ಕಾಸ್ಮೊಸ್ ಎದುರು ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ ತಂಡ 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು. ನ್ಯೂಯಾರ್ಕ್ ಕಾಸ್ಮೊಸ್ ಪರ ಫುಟ್​ಬಾಲ್ ದಿಗ್ಗಜ ಪಿಲೆ ಆಡಿದ್ದು ವಿಶೇಷ. ಭಾರತ ಫುಟ್​ಬಾಲ್ ಅಗ್ರ ಕ್ಲಬ್​ಗಳಾದ ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳ ತಂಡದ ಪ್ರತಿನಿಧಿಸಿರಲಿಲ್ಲ. ಬದಲಿಗೆ ನೌಕರಿ ನೀಡಿದ್ದ ಪೂರ್ವ ರೈಲ್ವೇಸ್ ತಂಡ ಪ್ರತಿನಿಧಿಸಿದ್ದರು. ‘ಆಡುವುದನ್ನು ಬಿಟ್ಟರೆ ನಾನು ಏನು ತಿನ್ನಲಿ’ ಎಂದು ಸದಾ ಹೇಳುತ್ತಿದ್ದ ಬ್ಯಾನರ್ಜಿ, 1970ರಲ್ಲಿ ಬ್ಯಾಂಕಾಕ್ ಏಷ್ಯಾಡ್​ನಲ್ಲಿ ಕಂಚು ಜಯಿಸಿದ ಭಾರತ ತಂಡಕ್ಕೆ ತರಬೇತಿ ನೀಡಿದ್ದರು. ಜಿಎಂ ಭಾಷಾ ಜತೆಗೂಡಿ ತರಬೇತಿ ನೀಡಿದ್ದರು. ಬಳಿಕ ಇವರ ಮಾರ್ಗದರ್ಶನದಲ್ಲೇ ಭಾರತ 1971ರಲ್ಲಿ ಸಿಂಗಾಪುರದಲ್ಲಿ ನಡೆದ ಪೆಸ್ಟಾ ಸುಕನ್ ಕಪ್ ಜಯಿಸಿತ್ತು. ಈಸ್ಟ್ ಬಂಗಾಳ ತಂಡ ಐದು ಬಾರಿ ಸಿಎಫ್​ಎಲ್ ಟ್ರೋಫಿ ಗೆದ್ದುಕೊಂಡಿತ್ತು.

ಈಸ್ಟ್ ಬೆಂಗಾಲ್ ಪರ ನನ್ನ ವೃತ್ತಿಜೀವನದ ಅತ್ಯುತ್ತಮ ಪಂದ್ಯಗಳನ್ನು ಪಿಕೆ ಬ್ಯಾನರ್ಜಿ ಮಾರ್ಗದರ್ಶನದಲ್ಲಿ ಆಡಿರುವೆ. ಅವರು ಎಂದೂ ಒತ್ತಡಕ್ಕೆ ಒಳಗಾಗದೆ ತಾಳ್ಮೆಯಿಂದ ಇರುತ್ತಿದ್ದರು. ಅವರು ಅತ್ಯುತ್ತಮ ಆಟಗಾರ, ಕೋಚ್ ಮಾತ್ರವಲ್ಲ, ಅತ್ಯುತ್ತಮ ವ್ಯಕ್ತಿಯೂ ಆಗಿದ್ದರು. ಅವರು ಯಾವಾಗಲೂ ಸಂತೋಷದಿಂದ ಇರುತ್ತಿದ್ದರು. ಇತರರನ್ನೂ ನಗಿಸುತ್ತಿದ್ದರು. | ಬೈಚುಂಗ್ ಭುಟಿಯಾ, ಭಾರತ ಫುಟ್​ಬಾಲ್ ತಂಡದ ಮಾಜಿ ನಾಯಕ ನನ್ನ ಆತ್ಮೀಯರನ್ನು ಕಳೆದುಕೊಂಡಿದ್ದೇನೆ. ನಾನು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದೆ ಮತ್ತು ಗೌರವಿಸುತ್ತಿದ್ದೆ. ನಾನು 18 ವರ್ಷದವನಿದ್ದಾಗಲೇ ನನ್ನ ವೃತ್ತಿಜೀವನದ ಮೇಲೆ ಭಾರಿ ಪ್ರಭಾವ ಬೀರಿದ್ದವರು. ಅವರ ಸಕಾರಾತ್ಮಕ ಚಿಂತನೆ ಎಲ್ಲರಿಗೂ ವ್ಯಾಪಿಸುವಂಥದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ. | ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಭಾರತದ ಫುಟ್​ಬಾಲ್ ದಿಗ್ಗಜ ಪಿಕೆ ಬ್ಯಾನರ್ಜಿ ಅವರನ್ನು ಹಲವು ಬಾರಿ ಭೇಟಿಯಾಗಿದ್ದೆ. ಆ ಸಮಯದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಪಡೆದುಕೊಂಡಿರುವೆ. | ಸಚಿನ್ ತೆಂಡುಲ್ಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net