More

    ಜನಸಂಖ್ಯೆಗಿಂತಲೂ ಅಧಿಕ ಆಧಾರ್!; 9 ರಾಜ್ಯಗಳಲ್ಲಿ ಬದುಕಿರುವವರಿಗಿಂತ ಹೆಚ್ಚು ಕಾರ್ಡ್

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಕರ್ನಾಟಕದಲ್ಲಿ 39,689 ನಕಲಿ ಆಧಾರ್ ಕಾರ್ಡ್​ಗಳು ಪತ್ತೆಯಾಗಿರುವ ಬೆನ್ನಲ್ಲೇ ದೇಶದ ಕೆಲ ರಾಜ್ಯಗಳಲ್ಲಿ ಅಲ್ಲಿರುವ ಜನಸಂಖ್ಯೆಗಿಂಥ ಹೆಚ್ಚಿನ ಆಧಾರ್ ಕಾರ್ಡ್​ಗಳು ವಿತರಣೆಯಾಗಿರುವ ಅಚ್ಚರಿಯ ವಿಚಾರ ಬಯಲಾಗಿದ್ದು, ಅಂದಾಜು 6 ಕೋಟಿ ಕಾರ್ಡ್​ಗಳು ನಕಲಿ ಹಾಗೂ ಮೃತಪಟ್ಟವರ ಹೆಸರಲ್ಲೇ ಇರುವುದು ದೃಢಪಟ್ಟಿದೆ. ಅಕ್ರಮವಾಗಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ ಇನ್ನಿತರ ಸರ್ಕಾರಿ ಯೋಜನೆಗಳಡಿ ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಬಾಂಗ್ಲಾದೇಶ ಸೇರಿ ಇನ್ನಿತರ ದೇಶಗಳ ಅಕ್ರಮ ನುಸುಳುಕೋರರಿಗೆ ಭಾರತೀಯ ನಾಗರಿಕ ಎಂದು ನಿರೂಪಿಸಲು ನಕಲಿ ಆಧಾರ್ ಕಾರ್ಡ್​ಗಳನ್ನು ಬಳಸಲಾಗುತ್ತಿದೆ.

    ಕರ್ನಾಟಕ, ಅಸ್ಸಾಂ, ಅರುಣಾಚಲಪ್ರದೇಶ, ಬಿಹಾರ, ಸಿಕ್ಕಿಂ ಸೇರಿ ಕೆಲ ರಾಜ್ಯಗಳಲ್ಲಿ ಅಂದಾಜಿಸಿರುವ ಜನಸಂಖ್ಯೆಗಿಂಥ ಶೇ.20 ರಿಂದ ಶೇ.5 ಮಂದಿಗೆ ಆಧಾರ್ ಕಾರ್ಡ್ ವಿತರಣೆ ಕಡಿಮೆ ಇದೆ. ಇನ್ನೂ ಕೆಲ ರಾಜ್ಯಗಳಲ್ಲಿ ಶೇ.40 ಮಂದಿಗೆ ಆಧಾರ್ ವಿತರಣೆಯಾಗಿಲ್ಲ. ಆದರೆ, ದೆಹಲಿ, ತೆಲಂಗಾಣ, ಗೋವಾ, ಕೇರಳ ಸೇರಿ 9 ರಾಜ್ಯಗಳಲ್ಲಿ ಜನಸಂಖ್ಯೆಗಿಂಥ ಹೆಚ್ಚು ಆಧಾರ್ ಕಾರ್ಡ್​ಗಳು ವಿತರಣೆಯಾಗಿರುವುದು ಆತಂಕ ಮೂಡಿಸಿದೆ.

    ಕರ್ನಾಟಕದಲ್ಲಿ 6,72,68,000 ಜನಸಂಖ್ಯೆ ಇದೆ. 6,48,93,395 ಆಧಾರ್ ಕಾರ್ಡ್​ಗಳು ಲೈವ್​ನಲ್ಲಿರುವ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಅಂದರೆ ರಾಜ್ಯದಲ್ಲಿ ಶೇ.96.47 ಜನರ ಮಾತ್ರ ಆಧಾರ್ ಪಡೆದಿದ್ದು, ಇನ್ನೂ 23.74 ಲಕ್ಷ (ಶೇ.3.53) ಮಂದಿ ಆಧಾರ್ ಕಾರ್ಡ್ ಪಡೆದಿಲ್ಲ. ಆಧಾರ್ (ದಾಖಲಾತಿ ಮತ್ತು ನವೀಕರಣ) ನಿಯಮಗಳು 2016ರ ಕಲಂ 28ರ ಅನ್ವಯ 2019ರಿಂದ 2022ರ ಜು.29ರವರೆಗೆ ರಾಜ್ಯದಲ್ಲಿ 12,552 ನಕಲಿ ಆಧಾರ್ ಕಾರ್ಡ್​ಗಳು ಪತ್ತೆಯಾಗಿದ್ದು, ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ, ರಾಜ್ಯದಲ್ಲಿ 39,689 ನಕಲಿ ಆಧಾರ್ ಕಾರ್ಡ್​ಗಳಿರುವುದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಪರಿಶೀಲನೆಯಲ್ಲಿ ದೃಢಪಟ್ಟಿದೆ.

    ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮಾಸಿಕ ಪಿಂಚಣಿಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ರೈತ ವಿಧವಾ ವೇತನ, ಮನಸ್ವಿನಿ, ಮೈತ್ರಿ ಮತ್ತು ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ನೀಡುವ ಮಾಸಿಕ ಪಿಂಚಣಿ ಹಣವನ್ನು ಖಜಾನೆ ತಂತ್ರಾಂಶ-2 ಮೂಲಕ ಆಧಾರ್ ಆಧಾರತಿ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿದ್ದು, ನಕಲಿ ಆಧಾರ್ ಸಂಖ್ಯೆ ಜೋಡಣೆ ಮಾಡಿ ಎರಡೆರಡು ಪಿಂಚಣಿ ಹಣ ಪಡೆಯುತ್ತಿರುವ ಪ್ರಕರಣಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    2023 ಫೆ.28ರವರೆಗಿನ ಮಾಹಿತಿ ಪ್ರಕಾರ ದೆಹಲಿಯಲ್ಲಿ 2,09,65,000 ಜನಸಂಖ್ಯೆ ಅಂದಾಜಿಸಲಾಗಿದೆ. ಆದರಿಲ್ಲಿ 2,27,80,450 ಜನರಿಗೆ ಆಧಾರ್ ಕಾರ್ಡ್ ವಿತರಿಸಲಾಗಿದೆ. ಅಂದರೆ ಶೇ.8.66 ಹೆಚ್ಚುವರಿ ಕಾರ್ಡ್​ಗಳು ವಿತರಣೆಯಾಗಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲೇ ಜನಸಂಖ್ಯೆಗಿಂಥ ಅತಿಹೆಚ್ಚು ಕಾರ್ಡ್​ಗಳನ್ನು ನೀಡಲಾಗಿದೆ. ಅದೇ ರೀತಿ ಗೋವಾದಲ್ಲಿ 15,67,000 ಜನಸಂಖ್ಯೆ ಇದ್ದರೆ 16,26,423 ಆಧಾರ್ ಕಾರ್ಡ್​ಗಳು ವಿತರಣೆಯಾಗಿದ್ದು, ಜನಸಂಖ್ಯೆಗಿಂಥ ಹೆಚ್ಚುವರಿಯಾಗಿ ಶೇ.3.79ರಷ್ಟು ಹೆಚ್ಚುವರಿ ಕಾರ್ಡ್ ನೀಡಲಾಗಿದೆ. ಕೇರಳದಲ್ಲಿ ಶೇ.5.06 ಹಾಗೂ ತೆಲಂಗಾಣದಲ್ಲಿ ಶೇ.1.78 ಜಾಸ್ತಿ ಆಧಾರ್ ಕಾರ್ಡ್ ವಿತರಿಸಲಾಗಿದೆ.

    11 ವೆಬ್​ಸೈಟ್​ಗಳು ಬ್ಲಾಕ್: ಅನಧಿಕೃತವಾಗಿ ಆಧಾರ್ ಕಾರ್ಡ್ ಸೇವೆ ಒದಗಿಸುತ್ತಿದ್ದ 11 ವೆಬ್​ಸೈಟ್​ಗಳನ್ನು ಬ್ಲಾ್ಯಕ್ ಮಾಡಲಾಗಿದೆ. ಆಧಾರ್ ಆನ್​ಲೈನ್ ಪತ್ರ ಡೌನ್​ಲೋಡ್, ಆಧಾರ್ ಅಪ್​ಡೇಟ್ ಸೇರಿ ಇನ್ನಿತರ ಸೇವೆಗಳನ್ನು ಅನಧಿಕೃತವಾಗಿ ಒದಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 2022ರಲ್ಲಿ ಕೇಂದ್ರ ಸರ್ಕಾರ ಬ್ಲಾ್ಯಕ್ ಮಾಡಿದೆ.

    ಜನಸಂಖ್ಯೆಗಿಂತಲೂ ಅಧಿಕ ಆಧಾರ್!; 9 ರಾಜ್ಯಗಳಲ್ಲಿ ಬದುಕಿರುವವರಿಗಿಂತ ಹೆಚ್ಚು ಕಾರ್ಡ್ಶ್ಯೂರಿಟಿಗೆ ಮಾರ್ಗಸೂಚಿ

    ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ನೀಡಲಾಗುವ ಜಾಮೀನಿಗೆ ಶ್ಯೂರಿಟಿ ನೀಡಲು ಮೃತರ ಹೆಸರಲ್ಲಿ ಆಧಾರ್ ಕಾರ್ಡ್ ಮಾಡಿಸಿದ್ದ ಪ್ರಕರಣ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಬೆಳಕಿಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಜಾಮೀನು ಶ್ಯೂರಿಟಿ ಪಡೆಯುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಮಾರ್ಗಸೂಚಿ ರೂಪಿಸಿತ್ತು. ನಕಲಿ ಆಧಾರ್ ಕಾರ್ಡ್​ಗಳನ್ನು ಸಲ್ಲಿಸುವುದನ್ನು ತಡೆಯುವುದಕ್ಕಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಎಲ್ಲ ನ್ಯಾಯಾಲಯಗಳಿಗೆ ಅಗತ್ಯ ಉಪಕರಣ ಹಾಗೂ ಸಾಫ್ಟ್​ವೇರ್ ಒದಗಿಸಬೇಕು ಸೇರಿ ಹಲವು ಮಾರ್ಗಸೂಚಿಗಳನ್ನು ನೀಡಿತ್ತು.

    ಜನಸಂಖ್ಯೆಗಿಂತಲೂ ಅಧಿಕ ಆಧಾರ್!; 9 ರಾಜ್ಯಗಳಲ್ಲಿ ಬದುಕಿರುವವರಿಗಿಂತ ಹೆಚ್ಚು ಕಾರ್ಡ್ಕಾರ್ಡ್ ಹೆಚ್ಚಲು ಕಾರಣವೇನು?

    • ಬಾಂಗ್ಲಾ, ನೇಪಾಳ ಸೇರಿ ಇನ್ನಿತರ ವಲಸಿಗರು ನಕಲಿ ದಾಖಲೆ ಸಲ್ಲಿಸಿ ಆಧಾರ್ ಕಾರ್ಡ್ ಪಡೆದಿರುವುದು.
    • ಮೃತಪಟ್ಟ ವ್ಯಕ್ತಿಗಳ ಆಧಾರ್ ಕಾರ್ಡ್ ರದ್ದಾಗುವ ವ್ಯವಸ್ಥೆ ಇಲ್ಲದಿರುವುದರಿಂದ ಮೃತಪಟ್ಟವರೂ ಆಧಾರ್ ಕಾರ್ಡ್​ನಲ್ಲಿ ಹೆಸರು ಮುಂದುವರಿದಿರುವುದು.
    • ಮರಣ ಪ್ರಮಾಣ ಪತ್ರ ಪಡೆದರೆ ಮಾತ್ರ ಅವರ ಆಧಾರ್ ನಂಬರ್ ಅನ್ನು ಯುಐಡಿಎಐನೊಂದಿಗೆ ಹಂಚಿಕೊಂಡು ನಿಷ್ಕ್ರಿಯಗೊಳಿಸಲು ಸಾಧ್ಯ.
    • ಜನಸಂಖ್ಯೆ ಅಂದಾಜಿನಲ್ಲಿ ಲೋಪ ಉಂಟಾಗಿರುವುದು ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಬಂದಿರುವ ಸಾಧ್ಯತೆ.

    ನಕಲಿ ಕಾರ್ಡ್ ಬಳಸುವುದೆಲ್ಲಿ?

    • ಭಾರತೀಯ ನಾಗರಿಕ ಎಂದು ಗುರುತಿಸಿಕೊಂಡು ಮಾಸಿಕ ಪಿಂಚಣಿ ಫಲಾನುಭವಿಗಳಾಗಲು.
    • ಬಾಂಗ್ಲಾ, ನೇಪಾಳ ಸೇರಿ ಇನ್ನಿತರ ದೇಶಗಳಿಂದ ಒಳನುಸುಳಿ ಅಕ್ರಮವಾಗಿ ವಾಸಿಸುವವರಿಗೆ
    • ವೇಶ್ಯವಾಟಿಕೆ, ಉದ್ಯೋಗ ಸೇರಿ ಇನ್ನಿತರ ಕೆಲಸಗಳಿಗೆ ನೆರೆಯ ರಾಷ್ಟ್ರಗಳಿಂದ ಕರೆತರಲು
    • ಹೊರದೇಶಗಳಿಂದ ರೈಲು, ವಿಮಾನಗಳ ಮೂಲಕ ಕಳ್ಳಸಾಗಾಣೆ ಮಾಡುವ ಹೆಣ್ಣುಮಕ್ಕಳಿಗೆ
    • 18 ವರ್ಷ ತುಂಬಿದೆ ಎಂದು ಆಧಾರ್ ಕಾರ್ಡ್​ನಲ್ಲಿ ನಮೂದಿಸಿ ಬಾಲ ಕಾರ್ವಿುಕರ ಸಾಗಾಣೆಗೆ
    • ಬ್ಯಾಂಕ್ ಸಾಲ ಪಡೆಯಲು ನಕಲಿ ಆಧಾರ್ ಕಾರ್ಡ್​ಗಳನ್ನು ಕೊಟ್ಟು ಹಣ ಪಡೆದು ವಂಚಿಸಲು
    • ಸರ್ಕಾರಿ ಯೋಜನೆಗಳಿಂದ ಸಿಗುವ ಸಬ್ಸಿಡಿ ಸೌಲಭ್ಯಕ್ಕಾಗಿ ವೈಯಕ್ತಿಕ ವಿವರ ತಿರುಚುವುದು

    ಬೆಂಗಳೂರು-ಮೈಸೂರು ದಶಪಥದಲ್ಲಿ ಭೀಕರ ಅಪಘಾತ: 2 ಸಲ ಪಲ್ಟಿಯಾದ ಕಾರು; ಐವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts