ಗೆಳತಿಗಾಗಿ ಪತ್ನಿಯ ಮೂಗನ್ನು ಕತ್ತರಿಸಿ ಜೇಬಿಗೆ ಹಾಕಿಕೊಂಡ ಪತಿ!

nose
Published on

ಉತ್ತರ ಪ್ರದೇಶ: ಪ್ರೀತಿ ಕುರುಡು. ಅತೀಯಾದ ಪ್ರೀತಿ ಎಂತಹ ದುಸ್ಸಾಹಸಕ್ಕೂ ಕೂಡಾ ನಮ್ಮನ್ನು ದೂಡುತ್ತದೆ ಎನ್ನುವುದು ಸತ್ಯ. ಇಲ್ಲೊಬ್ಬ ವ್ಯಕ್ತಿ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿಗೆ ಹಾಕಿಕೊಂಡು ಸ್ಥಳದಿಂದ ಎಸ್ಕೆಪ್​ ಆಗಿರುವ ಘಟನೆ ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ.

ರಕ್ತಸ್ರಾವದಿಂದ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿಯ ಮೂಗನ್ನು ಜೇಬಿನಲ್ಲಿ ಇಟ್ಟು ಪರಾರಿಯಾಗಿರುವ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.

ವಿಕ್ರಮ್ ಎಂಬ ವ್ಯಕ್ತಿ ತನ್ನ ಪತ್ನಿ ಸೀಮಾದೇವಿ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಮಿಥೌಲಿ ಪ್ರದೇಶದ ಬನ್ಸ್ಟಾಲಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಈ ಜೋಡಿ ಮದುವೆಯಾಗಿ 12 ವರ್ಷಗಳಾಗಿವೆ. ಆದರೆ ಇತ್ತೀಚಿಗೆ ವಿಕ್ರಂಗೆ ಮಹಿಳೆಯೊಬ್ಬಳ ಪರಿಚಯವಾಗಿದೆ. ನಂತರ ವಿಕ್ರಮ್​ ಆಕೆ ಜತೆ ಸಂಬಂಧ ಬೆಳೆಸಿದ್ದಾನೆ. ಇವರಿಬ್ಬರ ಸಂಬಂಧ ಸೀಮಾದೇವಿಗೆ ತಿಳಿಯಿತು. ಹೀಗೆ ಇಬ್ಬರ ನಡುವೆ ಜಗಳ ಮುಂದುವರಿದಿದೆ.

ಕಳೆದ ಶನಿವಾರ ವಿಕ್ರಮ್ ತನ್ನ ಪತ್ನಿ ಸೀಮಾದೇವಿಯೊಂದಿಗೆ ಜಗಳವಾಡಿದ್ದನು. ಅವರ ನಾಲ್ಕು ವರ್ಷದ ಮಗಳು ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಾಳೆ. ಆ ಮೊಬೈಲ್ ಕೊಡಲು ವಿಕ್ರಂ ಕೇಳುತ್ತಾನೆ. ಆದರೆ, ಮಗು ನೀಡಿಲ್ಲ. ಇದರಿಂದ ವಿಕ್ರಮ್ ಕೋಪಗೊಂಡು ಮಗುಗೆ ಹೊಡೆದಿದ್ದಾನೆ. ಅದನ್ನು ನೋಡಿ ಸೀಮಾದೇವಿ ತಡೆಯಲು ಹೋಗಿದ್ದಾಳೆ. ಆಗ ವಿಕ್ರಂ ಸಿಟ್ಟಿಗೆದ್ದು ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸೀಮಾದೇವಿಯ ಮೂಗಿಗೆ ಕೊಯ್ದಿದ್ದಾನೆ.ನೋವಿನಿಂದ ಸೀಮಾದೇವಿ ಕಿರುಚಿಕೊಂಡಿದ್ದು, ಸ್ಥಳೀಯರು ಬಂದಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಚಿಕಿತ್ಸೆ ಬಳಿಕ ಸೀಮಾದೇವಿ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಿ 12 ವರ್ಷಗಳಾಗಿವೆ, ವಿಕ್ರಮ್ ಪ್ರತಿದಿನ ಕುಡಿದು ಬರುತ್ತಾನೆ. ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಿದ್ದ. ಬದಲಾಗುತ್ತಾನೆ ಎಂದು ಕಾಯುತ್ತಿದ್ದಾಗ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಪ್ರತಿ ಬಾರಿ ಮನೆಗೆ ಬಂದಾಗ ಮಕ್ಕಳನ್ನು ಕಡೆಗಣಿಸಿ ಮಕ್ಕಳನ್ನೂ ಥಳಿಸುತ್ತಾನೆ ಎಂದು ದೂರನ್ನು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ವಿಕ್ರಂಗಾಗಿ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net