ಪೊಲೀಸ್ ಠಾಣೆ ಆವರಣದಲ್ಲೇ ತಾಯಿಗೆ ಬೆಂಕಿ ಹಚ್ಚಿದ ಮಗ!

fire
Published on

ಲಖನೌ: ಆಸ್ತಿ ಆಸೆಗಾಗಿ ಯುವಕನೊಬ್ಬ ಹೆತ್ತ ತಾಯಿಗೇ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದು, ಆಕೆ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮನಕಲಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲೇ ಘಟನೆ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.

ತಾನೇ ಬೆಂಕಿ ಹಚ್ಚಿ ಬಳಿಕ ಸಂಬಂಧಿ ಜತೆಗಿನ ಆಸ್ತಿ ವಿವಾದದಿಂದ ತಾಯಿ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ.

ಈ ಘಟನೆ ಮಂಗಳವಾರ ಖೈರ್ ಪೊಲೀಸ್ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಯುವಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ ಮಗ ಪೊಲೀಸ್​ ಠಾಣೆಗೆ ಬಂದಿದ್ದರು. ಸ್ವಲ್ಪ ಸಮಯದ ನಂತರ, ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಯಿಂದ ಹೊರಬಂದು ಆವರಣದೊಳಗಿನ ನಿರ್ಜನ ಸ್ಥಳಕ್ಕೆ ತೆರಳಿದರು.

ಅಲ್ಲಿ ಮಹಿಳೆ ತನಗೆ ನ್ಯಾಯ ಸಿಕ್ಕಿಲ್ಲ, ಪೆಟ್ರೋಲ್​ ಕ್ಯಾನ್​ ಮತ್ತು ಬೆಂಕಿ ಪೊಟ್ಟಣ ತೋರಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಹೆದರಿಸಿದ್ದಾಳೆ. ಆಗ ಪೊಲೀಸ್ ಕಾನ್​ಸ್ಟೇಬಲ್​ ಮಹಿಳೆಯ ಕೈಯಿಂದ ಬೆಂಕಿಪೊಟ್ಟಣ ಕಿತ್ತುಕೊಂಡು ಸಮಾಧಾನಪಡಿಸಿದ್ದಾರೆ. ಆದರೆ ಕಾನ್​ಸ್ಟೇಬಲ್​ ಅಲ್ಲಿಂದ ಮುಂದೆ ತೆರಳುತ್ತಿದ್ದಂತೆ ಲೈಟರ್ ಬಳಸಿ ತಾಯಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ನಂದಿಸಲು ಪೊಲೀಸರು ಮಹಿಳೆಯ ಮೇಲೆ ಗೋಣಿಚೀಲಗಳನ್ನು ಹಾಕಿದ್ದಾರೆ. ಆದರೆ ಆ ವೇಳೆಗಾಗಲೇ ಆಕೆಗೆ ಶೇ.44ಸುಟ್ಟಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಹೇಮಲತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net