

ರೋಮ್: ಕರೊನಾ ಕಾಲದ ಮೊದಲ ಪ್ರತಿಷ್ಠಿತ ಕಾದಾಟಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್ ಜಗತ್ತು ಸಜ್ಜಾಗಿದೆ. ಯುರೋಪ್ ಖಂಡದ ಫುಟ್ಬಾಲ್ ದೊರೆಯನ್ನು ನಿರ್ಣಯಿಸುವ ಯುರೋ ಕಪ್ಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಇಟಲಿ ಮತ್ತು ಟರ್ಕಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಡೆಯಬೇಕಾಗಿದ್ದ ಟೂರ್ನಿ, ಕರೊನಾ ಹಾವಳಿಯಿಂದಾಗಿ ಕೊನೇ ಕ್ಷಣದಲ್ಲಿ ಭರ್ತಿ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿತ್ತು. ಜುಲೈ 11ರವರೆಗೆ ಯುರೋಪ್ ಖಂಡದ 11 ನಗರಗಳಲ್ಲಿ ಸಾಗಲಿರುವ 24 ತಂಡಗಳ ಟೂರ್ನಿಯಲ್ಲಿ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ.
2021ಕ್ಕೆ ಮುಂದೂಡಿಕೆಯಾಗಿರುವ ಹೊರತಾಗಿಯೂ ‘ಯುರೋ 2020’ ಎಂದೇ ಟೂರ್ನಿ ಕರೆಯಲ್ಪಡಲಿದೆ. ಅಲ್ಲದೆ ಕರೊನಾ ವೈರಸ್ ಹಾವಳಿಯ ನಡುವೆಯೂ, ಒಂದೆರಡು ದೇಶ ಅಥವಾ ತಾಣಗಳಿಗೆ ಟೂರ್ನಿಯನ್ನು ಸೀಮಿತಗೊಳಿಸದೆ, 11 ದೇಶಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಹಿಂದಿನ ಯೋಜನೆಯನ್ನೇ ಉಳಿಸಿಕೊಳ್ಳಲಾಗಿದೆ. ಯುರೋ ಕಪ್ಗೆ 2020ಕ್ಕೆ 60 ವರ್ಷ ಪೂರ್ಣಗೊಂಡ ಸಂಭ್ರಮವನ್ನು ಆಚರಿಸುವುದು ಇದರ ಉದ್ದೇಶವಾಗಿದೆ. ಇನ್ನು ಕರೊನಾ ಭೀತಿಯ ನಡುವೆಯೂ ಪ್ರೇಕ್ಷಕರಿಗೂ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಲಭಿಸಲಿದ್ದು, ಎಲ್ಲ ಕ್ರೀಡಾಂಗಣಗಳಲ್ಲಿ ಗರಿಷ್ಠ 25ರಿಂದ 100ರವರೆಗೆ ಶೇಕಡಾವಾರು ಪ್ರಮಾಣದಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ಪ್ರವೇಶ ದೊರೆಯಲಿದೆ. 1960ರಿಂದ ನಡೆದಿರುವ ಹಿಂದಿನ 15 ಯುರೋ ಕಪ್ಗಳಲ್ಲಿ ಜರ್ಮನಿ, ಸ್ಪೇನ್ ಗರಿಷ್ಠ ತಲಾ 3 ಬಾರಿ ಪ್ರಶಸ್ತಿ ಜಯಿಸಿದ್ದರೆ, ಫ್ರಾನ್ಸ್ 2 ಬಾರಿ ಗೆದ್ದಿದೆ.
ಟೂರ್ನಿ ಸ್ವರೂಪ
ಟೂರ್ನಿಯಲ್ಲಿ ಆಡುವ 24 ತಂಡಗಳನ್ನು ತಲಾ 4ರಂತೆ 6 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಮತ್ತು 3ನೇ ಸ್ಥಾನ ಪಡೆದ ಅತ್ಯುತ್ತಮ 4 ತಂಡಗಳು ಪ್ರಿ ಕ್ವಾರ್ಟರ್ಫೈನಲ್ಗೇರಲಿವೆ. ವಿಶ್ವಕಪ್ ಚಾಂಪಿಯನ್ ಫ್ರಾನ್ಸ್, ಹಾಲಿ ಚಾಂಪಿಯನ್ ಪೋರ್ಚುಗಲ್ ಮತ್ತು ಇವೆರಡೂ ಟೂರ್ನಿಗಳ ಮಾಜಿ ಚಾಂಪಿಯನ್ ಜರ್ಮನಿ ಒಳಗೊಂಡ ಎಫ್ ಗುಂಪು ‘ಗ್ರೂಪ್ ಆಫ್ ಡೆತ್’ ಎನಿಸಿದೆ.
ಗುಂಪುಗಳು
ಎ: ಇಟಲಿ, ಸ್ವಿಜರ್ಲೆಂಡ್, ಟರ್ಕಿ, ವೇಲ್ಸ್.
ಬಿ: ಬೆಲ್ಜಿಯಂ, ರಷ್ಯಾ, ಡೆನ್ಮಾರ್ಕ್, ಫಿನ್ಲ್ಯಾಂಡ್
ಸಿ: ಉಕ್ರೇನ್, ನೆದರ್ಲೆಂಡ್, ಆಸ್ಟ್ರಿಯಾ, ಉತ್ತರ ಮಸೆಡೋನಿಯಾ.
ಡಿ: ಇಂಗ್ಲೆಂಡ್, ಕ್ರೊವೇಷಿಯಾ, ಜೆಕ್ ಗಣರಾಜ್ಯ, ಸ್ಕಾಟ್ಲೆಂಡ್.
ಇ: ಸ್ಪೇನ್, ಪೋಲೆಂಡ್, ಸ್ವೀಡನ್, ಸ್ಲೊವಾಕಿಯಾ.
ಎಫ್: ಜರ್ಮನಿ, ಫ್ರಾನ್ಸ್, ಪೋರ್ಚುಗಲ್, ಹಂಗೆರಿ.
ಇಂದಿನ ಪಂದ್ಯ
ಟರ್ಕಿ-ಇಟಲಿ
ಎಲ್ಲಿ: ಸ್ಟೇಡಿಯೊ ಒಲಿಂಪಿಕೊ, ರೋಮ್
ಆರಂಭ: ರಾತ್ರಿ 12.30
ನೇರಪ್ರಸಾರ: ಸೋನಿ ಟೆನ್ 2, 3, 4, ಸೋನಿ ಸಿಕ್ಸ್.
11 ತಾಣಗಳು:
-ವೆಂಬ್ಲೆ ಸ್ಟೇಡಿಯಂ, ಲಂಡನ್ (ಇಂಗ್ಲೆಂಡ್)
-ಅಲಿಯಂಜ್ ಅರೆನಾ, ಮ್ಯೂನಿಚ್ (ಜರ್ಮನಿ)
-ಸ್ಟೇಡಿಯೊ ಒಲಿಂಪಿಕೊ, ರೋಮ್ (ಇಟಲಿ)
-ಒಲಿಂಪಿಕ್ ಸ್ಟೇಡಿಯಂ, ಬಾಕು (ಅಜರ್ಬೈಜಾನ್)
-ಕ್ರೆಸ್ಟೋವ್ಸ್ಕಿ ಸ್ಟೇಡಿಯಂ, ಸೇಟ್ ಪೀಟರ್ಸ್ಬರ್ಗ್ (ರಷ್ಯಾ)
-ಅರೆನಾ ನ್ಯಾಷನಲಾ, ಬುಕಾರೆಸ್ಟ್ (ರೊಮೇನಿಯಾ)
-ಜೊಹನ್ ಕ್ರ್ು ಅರೆನಾ, ಆರ್ಮ್ಸ್ಟರ್ಡ್ಯಾಂ (ನೆದರ್ಲೆಂಡ್)
-ಇಸ್ಟಾಡಿಯೊ ಡಿ ಲಾ ಕಾರ್ಟುಜಾ, ಸೆವಿಲ್ಲಾ (ಸ್ಪೇನ್)
-ಪುಸ್ಕಸ್ ಅರೆನಾ, ಬುಡಾಪೆಸ್ಟ್ (ಹಂಗೆರಿ)
-ಹಂಪ್ಡೆನ್ ಪಾರ್ಕ್, ಗ್ಲಾಸ್ಗೊ (ಸ್ಕಾಟ್ಲೆಂಡ್)
-ಪಾರ್ಕೆನ್ ಸ್ಟೇಡಿಯಂ, ಕೋಪೆನ್ಹೆಗನ್ (ಡೆನ್ಮಾರ್ಕ್)
ಭಾರಿ ಬಹುಮಾನ ಮೊತ್ತ
ಟೂರ್ನಿ ಚಾಂಪಿಯನ್ ತಂಡ 88.84 ಕೋಟಿ ರೂ. (10 ದಶಲಕ್ಷ ಯುರೋ) ಬಹುಮಾನ ಗಳಿಸಲಿದೆ. ರನ್ನರ್ಅಪ್ ತಂಡ 62.19 ಕೋಟಿ ರೂ. ಪಡೆಯಲಿದೆ. ಸೆಮಿಫೈನಲಿಸ್ಟ್ ತಂಡಗಳಿಗೆ ತಲಾ 44.42 ಕೋಟಿ ರೂ. ದೊರೆತರೆ, ಕ್ವಾರ್ಟರ್ಫೈನಲ್ನಲ್ಲಿ ಸೋತ ತಂಡಗಳು ತಲಾ 28.87 ಕೋಟಿ ರೂ. ಗಳಿಸಲಿವೆ. 16ರ ಘಟ್ಟದಲ್ಲಿ ನಿರ್ಗಮಿಸಿದ ತಂಡಗಳು ತಲಾ 17.76 ಕೋಟಿ ರೂ. ಪಡೆಯಲಿವೆ. ಗುಂಪು ಹಂತದಲ್ಲಿ ಪ್ರತಿ ಗೆಲುವಿಗೆ 13.32 ಕೋಟಿ ರೂ ಮತ್ತು ಡ್ರಾ ಸಾಧಿಸಿದರೆ 6.66 ಕೋಟಿ ರೂ. ಸಿಗಲಿದೆ. ಟೂರ್ನಿಯಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ಕನಿಷ್ಠ 82.15 ಕೋಟಿ ರೂ. ಪಾರ್ಟಿಸಿಪೇಷನ್ ಫೀ ಸಿಗುವುದು ಖಚಿತ. ವಿಜೇತ ತಂಡಕ್ಕೆ ಗರಿಷ್ಠ 301 ಕೋಟಿ ರೂ. ಕೊಂಡೊಯ್ಯುವ ಅವಕಾಶವಿದೆ.
ದಾಖಲೆ ನಿರೀಕ್ಷೆಯಲ್ಲಿ ರೊನಾಲ್ಡೊ
ಕ್ರಿಶ್ಚಿಯಾನೊ ರೊನಾಲ್ಡೊ ಇನ್ನೊಂದು ಗೋಲು ಬಾರಿಸಿದರೆ ಟೂರ್ನಿ ಇತಿಹಾಸದಲ್ಲಿ ಗರಿಷ್ಠ ಗೋಲು ಬಾರಿಸಿದ ಸಾಧಕರೆನಿಸಲಿದ್ದಾರೆ. ಸದ್ಯ ಅವರು 9 ಗೋಲು ಬಾರಿಸಿ ಫ್ರಾನ್ಸ್ನ ಮೈಕೆಲ್ ಪ್ಲಾಟಿನಿ ಜತೆಗೆ ದಾಖಲೆ ಹಂಚಿಕೊಂಡಿದ್ದಾರೆ. 36 ವರ್ಷದ ರೊನಾಲ್ಡೊ (104) ಟೂರ್ನಿಯಲ್ಲಿ 6 ಗೋಲು ಬಾರಿಸಿದರೆ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಗರಿಷ್ಠ 109 ಗೋಲು ಬಾರಿಸಿದ ಇರಾನ್ನ ಅಲಿ ಡೇಯಿ ವಿಶ್ವದಾಖಲೆಯನ್ನೂ ಮುರಿಯಲಿದ್ದಾರೆ.