ಐದು ದಶಕಗಳ ಬಳಿಕ ಕೊನೆಗೂ ಸಹೋದರಿ ಕೈ ಸೇರಿದ ಯೋಧನ ಪತ್ರ

LETTER JPG
Published on

ನಾರ್ತ್ ವರ್ನಾನ್: ಅವು ವಿಯೆಟ್ನಾಂ ಯುದ್ಧದ ದಿನಗಳು. ಅಲ್ಲೊಬ್ಬ ಯೋಧ ಸೇನಾ ಅನುಭವಗಳನ್ನು ಹಂಚಿಕೊಂಡು ತನ್ನ ಸಹೋದರಿಗೆ ಪತ್ರ ಬರೆಯುತ್ತಾನೆ. ವಿಳಾಸ ತಪ್ಪಾಗಿಯೋ ಅಥವಾ ಇನ್ನಾವುದೋ ಕಾರಣದಿಂದಾಗಿ ಬರೊಬ್ಬರಿ 52 ವರ್ಷಗಳ ನಂತರ ಆ ಪತ್ರ ಆಕೆಯ ಕೈ ಸೇರುತ್ತದೆ. ಮೊದಮೊದಲು ಆಕೆ ಇದು ಯಾರು ಬರೆದ ಪತ್ರವಿರಬಹುದು ಎಂಬ ಗೊಂದಲಕ್ಕೊಳಗಾದರೂ ಕೊನೆಗೆ ತನ್ನ ಸಹೋದರನೇ 52 ವರ್ಷಗಳ ಹಿಂದೆ ಬರೆದದ್ದು ಎಂದು ಖಚಿತವಾಗಿ, ಕಣ್ಣಾಲಿಗಳು ತುಂಬುತ್ತವೆ.
ಇದು ಯಾವುದೋ ಒಂದು ಹಳೆಯ ಸಿನೆಮಾ ಕಥೆಯಲ್ಲ. ನಂಬಲಸಾಧ್ಯವಾದರೂ ನೈಜ ಘಟನೆಯೇ.
1968ರಲ್ಲಿ, ಬರೊಬ್ಬರಿ 52 ವರ್ಷಗಳ ಹಿಂದೆ ವಿಯೆಟ್ನಾಂ ಯುದ್ಧದಲ್ಲಿದ್ದ ಯೋಧನೊಬ್ಬ ತನ್ನ ಸಹೋದರಿಗೆ ಬರೆದ ಪತ್ರವೊಂದು 52 ವರ್ಷಗಳ ಬಳಿಕ ಕೈ ಸೇರಿದೆ.

ಆತ ವಿಲಿಯಂ ಲೋನ್. ವಿಯೆಟ್ನಾಂ ಯುದ್ಧದಲ್ಲಿ ಸೈನಿಕನಾಗಿದ್ದ. ತನ್ನ ಸಹೋದರಿ ಉತ್ತರ ವರ್ನಾನ್​​​ನ ಜಾನೀಸ್ ಟಕರ್​​ಗೆ ಪತ್ರವೊಂದು ಬರೆದಿದ್ದ. 2020ರ ಮೇ 10ರಂದು ಪೋಸ್ಟ್ ಮಾರ್ಕ್ ಮಾಡಲಾಗಿದ್ದ ಈ ಲಕೋಟೆಯಲ್ಲಿ 1968ರ ರಲ್ಲಿ ಬರೆದ ಪತ್ರಗಳಿದ್ದವು.
ಹಾಯ್ ಸಿಸ್ ಎಂದು ಆರಂಭವಾದ ಈ ಪತ್ರ ಐದು ಪುಟಗಳದ್ದಾಗಿತ್ತು. ಪತ್ರ ನೋಡುತ್ತಿದ್ದಂತೆ ಟಕರ್ ಗೊಂದಲಕ್ಕೀಡಾದರು. ನಂತರ ಅದು ಸಹೋದರ ವಿಯೆಟ್ನಾಂ ಯುದ್ಧದ ವೇಳೆ ಬರೆದಿದ್ದ ಪತ್ರ ಎಂಬುದು ಗೊತ್ತಾಯಿತು, ತಕ್ಷಣ ದಕ್ಷಿಣ ಕೆರೋಲಿನಾದಲ್ಲಿರುವ ಸಹೋದರ ವಿಲಿಯಂ ಗೆ ಕರೆ ಮಾಡಿ ಈ ಪತ್ರದ ಕುರಿತು ತಿಳಿಸುತ್ತಿದ್ದಂತೆ ಆತ ಈ ಪತ್ರವನ್ನು ನಾನೇ ನಿನಗೆ ಬರೆದಿದ್ದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

ಈ ಪತ್ರ ಬರೆದಾಗ ಜಾನಿಸ್​​​​ಗೆ 17 ವರ್ಷ. ವಿಲಿಯಂ ಆ ಪತ್ರ ಬರೆದು ನಂತರ ತಂಗಿಗೆ ತಲುಪಿಸುವಂತೆ ಮತ್ತೊಬ್ಬ ಸೈನಿಕನಿಗೆ ಕೊಟ್ಟಿದ್ದರಂತೆ. ತಪ್ಪು ವಿಳಾಸದಿಂದಾಗಿಯೋ ಅಥವಾ ಯಾವುದೋ ಕಾರಣದಿಂದ ಇಷ್ಟು ವರ್ಷ ಈ ಪತ್ರ ಟಕರ್​​ಗೆ ತಲುಪಿರಲಿಲ್ಲ. ಅಷ್ಟೇ ಅಲ್ಲದೆ ಪತ್ರದ ಲಕೋಟೆ ಕೂಡ ಹೊಸದಾಗಿತ್ತು. ಹೀಗಾಗಿ, ಬಹುಶಃ ತಪ್ಪಾದ ವಿಳಾಸಕ್ಕೆ ಹೋಗಿದ್ದ ಈ ಪತ್ರ ಯಾರದ್ದೋ ಕೈ ಸೇರಿ ಮತ್ತೆ ಅವರು ಇದನ್ನು ಇಲ್ಲಿಗೆ ಕಳುಹಿಸಿರಬಹುದು. ಅಂತಿಮವಾಗಿ ಈ ಪತ್ರ ಟಕ್ಕರ್ ಕೈ ಸೇರಿರುವ ಸಾಧ್ಯತೆ ಇದೆ. ಹೀಗಾಗಿ, ಈ ಪತ್ರ ತಮ್ಮ ಕೈಸೇರುವಂತೆ ಮಾಡಿದ ಎಲ್ಲರಿಗೂ ಟಕರ್ ಧನ್ಯವಾದ ತಿಳಿಸಿದ್ದಾರೆ.  ವಿಲಿಯಂ ಈ ಪತ್ರದಲ್ಲಿ ತಮ್ಮ ಸೇನಾ ಅನುಭವಗಳನ್ನು ಕುರಿತು ಬರೆದುಕೊಂಡಿದ್ದರು. ಇದನ್ನು ಓದಿ ಜಾನಿಸ್ ಕಣ್ಣಾಲಿಗಳು ತುಂಬಿ ಬಂದಿದ್ದವು. ಬರೊಬ್ಬರಿ ಐದು ದಶಕಗಳ ನಂತರ ಕೈ ತಲುಪಿದ ಪತ್ರವನ್ನು ಕೈಯಲ್ಲೇ ಜೋಪಾನವಾಗಿಟ್ಟುಕೊಂಡು ಇವರು ಸಂಭ್ರಮಿಸುತ್ತಿದ್ದಾರೆ ಟಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net