ಐ ಡ್ರಾಪ್​ ಬದಲು ನೈಲ್​ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?

eye drop
Published on

ವಾಷಿಂಗ್ಟನ್​: ಮಾನವನ ದೇಹದ ಅತಿ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಸೇರುತ್ತದೆ. ಐ ಡ್ರಾಪ್​ ಹಾಕುವಾಗಲೂ ಅತಿ ಎಚ್ಚರಿಕೆಯಿಂದ ಹಾಕಬೇಕು ಎನ್ನಲಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಐ ಡ್ರಾಪ್​ ಹಾಕಿಕೊಳ್ಳುವ ಬದಲು ನೈಲ್​ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.

ಅಮೆರಿಕದ ಮಿಚಿಗನ್​ ಮೂಲದ ಯಾಕೆಡ್ರಾ ವಿಲಿಯಮ್ಸ್ ಈ ರೀತಿ ಪೇಚಿಗೆ ಸಿಲುಕಿದ ಮಹಿಳೆ. ಆಕೆ ಲೆನ್ಸ್​ ಬಳಕೆ ಮಾಡುತ್ತಿದ್ದು, ಏಪ್ರಿಲ್​ 15ರ ರಾತ್ರಿ ಲೆನ್ಸ್​ ಹಾಕಿಕೊಂಡೇ ಮಲಗಿದ್ದಳಂತೆ. ರಾತ್ರಿ 1 ಗಂಟೆಯ ಹೊತ್ತಿಗೆ ಲೆನ್ಸ್​ ತೆಗೆಯಬೇಕೆನಿಸಿ, ಎದ್ದು ಲೆನ್ಸ್​ ತೆಗೆಯಲು ಮುಂದಾಗಿದ್ದಾಳೆ. ಪರ್ಸ್​ನಲ್ಲಿದ್ದ ಐ ಡ್ರಾಪ್​ನ್ನು ತೆಗೆಯಲು ಕೈ ಹಾಕಿದ್ದಾಳೆ. ಆಗ ಆಕೆಗೆ ಐ ಡ್ರಾಪ್​ ಬಾಟೆಲ್​ ಗಾತ್ರದ್ದೇ ಆಗಿದ್ದ ನೈಲ್​ ಗ್ಲ್ಯೂ ಸಿಕ್ಕಿದೆ. ಅದನ್ನು ಕಣ್ಣಿಗೆ ಹಾಕಿಕೊಂಡಿದ್ದಾಳೆ.

ನೈಲ್​ ಗ್ಲೂ ಕಣ್ಣಿಗೆ ಬಿದ್ದ ತಕ್ಷಣ ಕಣ್ಣು ನೋವು ಮತ್ತು ತುರಿಕೆ ಶುರುವಾಗಿದೆ. ತಕ್ಷಣ ತಾನು ಮಾಡಿದ ತಪ್ಪೇನೆಂದು ಆಕೆಯ ಅರಿವಿಗೆ ಬಂದಿದೆ. ಕಣ್ಣು ಬಿಡದಂತೆ ರೆಪ್ಪೆಗಳು ಅಂಟಿಕೊಂಡಿವೆ. ಗಂಡನನ್ನು ಕೂಗಿ ಕರೆದು ಆ್ಯಂಬುಲೆನ್ಸ್​ಗೆ ಕರೆ ಮಾಡಲು ಹೇಳಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು ಸತತ ಎರಡು ಗಂಟೆ ಪ್ರಯತ್ನ ಮಾಡಿ ಆಕೆ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಕಣ್ಣಿನಲ್ಲಿ ಲೆನ್ಸ್​ ಇದ್ದ ಕಾರಣದಿಂದಾಗಿ ಆಕೆಯ ಕಣ್ಣು ಉಳಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯ ರೆಪ್ಪೆಯ ಕೂದಲು ಸಂಪೂರ್ಣವಾಗಿ ಉದುರಲಿದೆ ಎಂದೂ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net