

ಹಾಸನ: ಹಸು ಮೇಯಿಸಲು ಜಮೀನಿನ ಬಳಿ ತೆರಳಿದ್ದ ಸೈನಿಕರೊಬ್ಬರ ತಾಯಿ ನಾಪತ್ತೆ ಪ್ರಕರಣದ ರಹಸ್ಯ ಒಂದೂವರೆ ತಿಂಗಳ ಬಳಿಕ ಬಯಲಾಗಿದೆ. ಬಟ್ಟೆ ಜತೆ ಅಸ್ಥಿಪಂಜರ ರೂಪದಲ್ಲಿ ಯೋಧನ ತಾಯಿಯ ಶವ ಪತ್ತೆಯಾಗಿದೆ.
ಹಾಸನ ತಾಲೂಕು ನಾರಾಯಣಪುರ ಗ್ರಾಮದ ಸೈನಿಕ ರಾಕೇಶ್ ಕಳೆದ ಏಳು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದು, ಪ್ರಸ್ತುತ ಶಿಮ್ಲಾದಲ್ಲಿ ಕರ್ತವ್ಯದಲ್ಲಿದ್ದಾರೆ. ಮನೆಯಲ್ಲಿದ್ದ ತಂದೆ-ತಾಯಿ ಹೈನುಗಾರಿಕೆ ಮತ್ತು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಜುಲೈ 20ರಂದು ದನಗಳನ್ನು ಮೇಯಿಸಲು ಜಮೀನಿನ ಬಳಿ ಹೋಗಿದ್ದ ರತ್ನಮ್ಮ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಅವರ ಫೋನ್ಗೆ ಕರೆ ಮಾಡಿದಾಗ ಜಮೀನಿನ ಬಳಿಯಿದ್ದ ಬೇರೆಯವರು ಫೋನ್ ರಿಸೀವ್ ಮಾಡಿ ನಿಮ್ಮ ತಾಯಿಯ ಫೋನ್ ಜಮೀನಿನ ಬಳಿ ಬಿದ್ದಿದೆ ಎಂದು ತಿಳಿಸಿದ್ದರು.
ಕೂಡಲೇ ಮಕ್ಕಳು ಶಾಂತಿಗ್ರಾಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ನಡುವೆ ಊರಿನಲ್ಲಿ ನಡೆದ ಕೆಲ ಘಟನೆ ಆಧರಿಸಿ ರತ್ನಮ್ಮ ಸಂಬಂಧಿಗಳು "ರತ್ನಮ್ಮ ಕಣ್ಮರೆ ಹಿಂದೆ ಮಹೇಶ ಎಂಬಾತನ ಕೈವಾಡ ಇದೆ'' ಎಂಬುದಾಗಿ ಅನುಮಾನ ವ್ಯಕ್ತಪಡಿಸಿದ್ದರು.
ಪೊಲೀಸರು ಆತನನ್ನು ಕರೆತಂದು ವಿಚಾರಣೆ ಮಾಡಿದರೂ ರತ್ನಮ್ಮನ ಸುಳಿವು ಸಿಕ್ಕಿರಲಿಲ್ಲ. ಸೇನೆಯಲ್ಲಿ ಇದ್ದ ಮಗ ಊರಿಗೆ ಬಂದು ಒಂದು ತಿಂಗಳು ಹುಡುಕಾಡಿದರೂ ಪ್ರಯೋಜನ ಆಗಿರಲಿಲ್ಲ. ಆದರೆ, ಸೋಮವಾರ ನಾರಾಯಣಪುರದ ಜಗದೀಶ್ ಅವರು ತಮ್ಮ ಹೊಲದಲ್ಲಿ ಜೋಳ ಕಟಾವಿಗೆ ಹೋದಾಗ ಹೊಲದ ಮಧ್ಯದಲ್ಲಿ ಅಸ್ಥಿಪಂಜರ ಕಂಡುಬಂದಿದೆ. ಅಲ್ಲಿಯೇ ರತ್ನಮ್ಮ ಧರಿಸಿದ್ದ ಸೀರೆ ಕೂಡ ಸಿಕ್ಕಿದೆ. ಹಾಗಾಗಿ ಅದು ರತ್ನಮ್ಮನದೇ ಅಸ್ಥಿ ಪಂಜರ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಅಸ್ಥಿಪಂಜರ ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ.