

Woman : ಕೂದಲು, ಬಟ್ಟೆ ಮಾರಿ ಹಣ ಪಡೆಯುವುದನ್ನು ನಾವು ಕೇಳಿರಬಹುದು ಹಾಗೇ ನೋಡಿರಬಹುದು. ಆದರೆ, ಇಲ್ಲೊಬ್ಬ ಚೀನೀ ಮಹಿಳೆ ಬಾಲ್ಯದಿಂದಲೂ ತನ್ನ ಉಗುರಗಳನ್ನು ಸಂರಕ್ಷಿಸಿ, ಅವುಗಳನ್ನು ಮಾರಿ ಹಣ ಪಡೆಯುತ್ತಿರುವುದು ಕೇಳುಗರಿಗೆ ಅಚ್ಚರಿ ಮೂಡಿಸಿದೆ.
ಚೀನಾದ ಹೆಬೈ ಪ್ರಾಂತ್ಯದ ಈ ಮಹಿಳೆ ತನ್ನ ಉಗುರುಗಳನ್ನು ಪ್ರತಿ ಕಿಲೋಗ್ರಾಂಗೆ ಸುಮಾರು ರೂ. 1,750 ಗೆ ಮಾರಾಟ ಮಾಡುತ್ತಾರೆ. ಈ ಉಗುರುಗಳನ್ನು ಸಾಂಪ್ರದಾಯಿಕ ಚೀನೀ ಔಷಧದಲ್ಲಿ ತಯಾರಿಯಲ್ಲಿ ಬಳಸಲಾಗುತ್ತದೆ.
ಸಾಂಪ್ರದಾಯಿಕ ಚೀನೀ ಔಷಧಿಗಳಲ್ಲಿ (TMC)ಮಾನವ ಉಗುರುಗಳನ್ನು "ಜಿನ್ ತುಯಿ" ಎಂದು ಕರೆಯಲಾಗುತ್ತದೆ. ಅವು ದೇಹದ ಉಷ್ಣತೆ ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಇದು ಮಕ್ಕಳಲ್ಲಿ ಗಾಯಗಳನ್ನು ಗುಣಪಡಿಸಲು ಮತ್ತು ವಾಯು ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉಗುರು ಪರಿಣಾಮಕಾರಿ ಎಂದು ಪ್ರಾಚೀನ ಗ್ರಂಥಗಳು ಉಲ್ಲೇಖಿಸಿವೆ.
ಪ್ರಸಿದ್ಧ ಚೀನೀ ಟ್ಯಾಂಗ್ ರಾಜವಂಶದ ವೈದ್ಯ ಸನ್ ಸಿಮಿಯಾವೊ ಅವರ ಪುಸ್ತಕವಾದ "ಕ್ವಿಯಾಂಜಿನ್ ಯಾವೋಫಾಂಗ್" (ತುರ್ತು ಪರಿಸ್ಥಿತಿಗಳಿಗೆ ಸಾವಿರ ಚಿನ್ನದ ಮೌಲ್ಯದ ಅಗತ್ಯ ಸೂತ್ರಗಳು) ಮಕ್ಕಳಲ್ಲಿ ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸುವ ಸಲುವಾಗಿ ಉಗುರುಗಳನ್ನು ಬಳಸಲಾಗುತ್ತಿತ್ತು. ಉಗುರು ಬೂದಿಯನ್ನು ಎದೆ ಹಾಲಿನೊಂದಿಗೆ ಸೇರಿಸಿ ಶೀಶುಗಳಿಗೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದರು.
1960 ರ ದಶಕದವರೆಗೆ ಚೀನಾ ಆಸ್ಪತ್ರೆಗಳಲ್ಲಿ ಉಗುರುಗಳನ್ನು ಔಷಧಿಯಾಗಿ ಬಳಸಲಾಗುತ್ತಿತ್ತು. ನಂತರ, ಇತರ ಗಿಡಮೂಲಿಕೆ ಮತ್ತು ನೈಸರ್ಗಿಕ ಪರ್ಯಾಯಗಳು ಲಭ್ಯವಾಗುತ್ತಿದ್ದಂತೆಯೇ ಅವುಗಳ ಬಳಕೆ ಕ್ರಮೇಣ ಕಡಿಮೆಯಾಯಿತು. ವಾಸ್ತವವಾಗಿ, ಉಗುರುಗಳನ್ನು ಸಂಗ್ರಹಿಸುವುದು ಸುಲಭವಲ್ಲ. ಒಬ್ಬ ವ್ಯಕ್ತಿಯು ವರ್ಷಕ್ಕೆ ಸುಮಾರು 100 ಗ್ರಾಂ ಉಗುರುಗಳನ್ನು ಮಾತ್ರ ಬೆಳೆಯುತ್ತಾನೆ. ಅದಕ್ಕಾಗಿಯೇ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುವುದು ಕಷ್ಟಕರ ಸಂಗತಿಯಾಗಿದೆ.
ಔಷಧಿಗಳಲ್ಲಿ ಉಗುರುಗಳ ಬಳಕೆ ಮಾಡುವುದು ಇಂದು ಕಡಿಮೆಯಾಗಿದ್ದರೂ, 2018 ರಲ್ಲಿ ರಚಿಸಲಾದ ಚೀನೀ ಪೇಟೆಂಟ್ ಪಡೆದ ಹೌಯಾನ್ವಾನ್ ಔಷಧದಲ್ಲಿ ಉಗುರುಗಳ ಬಳಕೆಯನ್ನು ವ್ಯಾಪಕವಾಗಿ ಗುರುತಿಸಲಾಗಿದೆ. ಈ ಮೊದಲು ಗಂಟಲು ನೋವಿಗೆ ಚಿಕಿತ್ಸೆ ನೀಡಲು ಈ ಔಷಧಿಯನ್ನು ಬಳಸಲಾಗುತ್ತಿತ್ತು. ಉಗುರುಗಳನ್ನು ಮಾತ್ರವಲ್ಲದೆ, ಮಾನವ ದೇಹದ ಇತರ ಭಾಗಗಳನ್ನು ಸಹ TCM ನಲ್ಲಿ ಬಳಸಲಾಗುತ್ತದೆ. ಉಗುರುಗಳ ಜೊತೆಗೆ, ಹಲ್ಲುಗಳು, ಕೂದಲು ಮತ್ತು ತಲೆಹೊಟ್ಟು ಸಹ ಔಷಧೀಯವಾಗಿ ಬಳಸಲ್ಪಡುತ್ತದೆ ಎಂದು ಸಂಶೋಧನೆಗಳು ವರದಿ ಮಾಡಿವೆ. (ಏಜೆನ್ಸೀಸ್)