ಕೊಕ್ಕಡ ಗ್ರಾಮಸಭೆ ಮುಂದೂಡಿಕೆ : ಕೋರಂ ಕೊರತೆ, ಅಧಿಕಾರಿಗಳ ಗೈರು ಹಿನ್ನೆಲೆ

New Project (5)
Published on

ಕೊಕ್ಕಡ: ಕೊಕ್ಕಡ ಗ್ರಾ.ಪಂ.ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಸೋಮವಾರ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದು, ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು.

ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪಿಡಿಒ ದೀಪಕ್ ರಾಜ್ ವರದಿ ಓದಲು ಮುಂದಾದಾಗ ಗ್ರಾಮಸ್ಥ ಲಕ್ಷ್ಮೀ ನಾರಾಯಣ, ಅಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗ್ರಾಮಸಭೆ ಮುಂದೂಡಿ ಎಂದು ಆಗ್ರಹಿಸಿದರು.

ಹೇಮಲತಾ ಮಾತನಾಡಿ, ಗ್ರಾಮಮಟ್ಟದ ಅಧಿಕಾರಿಗಳು ಇದ್ದು, ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಲು ಸಮಸ್ಯೆ ಎದುರಾಗಿದೆ. ಕೆಲವು ಅಧಿಕಾರಿಗಳು ಬರುತ್ತಿದ್ದಾರೆ ಎಂದರು. 12 ಗಂಟೆಯಾದರೂ ಅಧಿಕಾರಿಗಳು ಬಾರದ ಕಾರಣ ಕೆಲ ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ಇಲ್ಲದಿರುವುದರಿಂದ ಗ್ರಾಮಸಭೆ ಮುಂದೂಡಿ ಎಂದು ಒತ್ತಾಯಿಸಿದರು.

ರಿಕ್ಷಾ ತಂಗುದಾಣದ ಕುರಿತು ರಿಕ್ಷಾ ಚಾಲಕ-ಮಾಲೀಕರು ಪಿಡಿಒ ಅವರನ್ನು ಪ್ರಶ್ನಿಸಿ, ನೀವು ಕೊಕ್ಕಡದಲ್ಲಿ ಆಟೋ ನಿಲ್ದಾಣವೇ ಇಲ್ಲ ಎಂದು ದಾಖಲೆಯಲ್ಲಿ ಹೇಳಿರುವುದಾಗಿ ಪಂಚಾಯಿತಿಯಲ್ಲಿ ಮಾಹಿತಿ ದೊರಕಿದೆ. ಆಟೋ ನಿಲ್ದಾಣದ ಜಾಗದಿಂದ ಗ್ರಾಮ ಪಂಚಾಯಿತಿಗೆ ಹಲವು ವರ್ಷಗಳಿಂದ ತೆರಿಗೆ ಪಾವತಿಸುತ್ತಿದ್ದೇವೆ. ಆಟೋ ನಿಲ್ದಾಣವೇ ಇಲ್ಲ ಎಂದಾದರೆ ಹೇಗೆ ಪಡೆದುಕೊಳ್ಳುತ್ತೀರಿ? ಎಂದು ಪ್ರಶ್ನಿಸಿದರು. ಈ ವೇಳೆ ತಬ್ಬಿಬ್ಬಾದ ಪಿಡಿಒ ಗ್ರಾಮಸಭೆ ಮುಂದೂಡುವಂತೆ ಹೇಳಿ ಸಭೆಯಿಂದ ಹೊರಟು ಹೋದರು. ನೋಡಲ್ ಅಧಿಕಾರಿ ಇರುವಾಗಲೇ ಪಿಡಿಒ ಅವರ ಈ ಹೇಳಿಕೆಗೆ ಪಂಚಾಯಿತಿ ಸದಸ್ಯರು ಅಸಮಾಧಾನಗೊಂಡರು.

ಮಾರ್ಗದರ್ಶಿ ಅಧಿಕಾರಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಸಂಪರ್ಕಿಸಿದ ನಂತರ ಪಿಡಿಒ ಆಗಮಿಸಿದರಾದರೂ ಗ್ರಾಮಸಭೆ ನಡೆಸಲು ಗ್ರಾಮಸ್ಥರ ಕೋರಂ ಇಲ್ಲದ ಕಾರಣ ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆ ಮುಂದೂಡಿದರು. ನಿಯೋಜಿತ ಪಿಡಿಒ, ಉಪಾಧ್ಯಕ್ಷ ಪ್ರಭಾಕರ್, ಪಂಚಾಯಿತಿ ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net