

ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವಿಠಲ ರಕುವಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶತವಾನೋತ್ಸವದ ನೆನಪಿಗಾಗಿ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠದ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಮಹೋತ್ಸವ ಪ್ರಯುಕ್ತ ಗಂಗೊಳ್ಳಿಯ ಶ್ರೀ ವಿಠಲ ರಕುವಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಜು.6ರಿಂದ 13ರ ವರೆಗೆ ನಡೆಯಲಿದೆ.
6ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಗುಜ್ಜಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಿಂದ ಶ್ರೀ ವಿಠಲ ರಕುವಾಯಿ ತಥಾ ಮುಖ್ಯಪ್ರಾಣ ದೇವಸ್ಥಾನವರೆಗೆ ನಗರ ಭಜನೆ, ಶ್ರೀ ದೇವರಿಗೆ ಅಭಿಷೇಕ, ಮಹಾಪೂಜೆ, ರಾತ್ರಿ ಪೂಜೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
11ರಂದು ಸುಕೃತೀಂದ್ರ ತೀರ್ಥ ಸ್ವಾಮೀಜಿ ಪುಣ್ಯತಿಥಿ ಆರಾಧನೆ, ರಾತ್ರಿ ದೇವರಿಗೆ ವಿಶೇಷ ಹರಿವಾಣ ನೈವೇದ್ಯ ಪೂಜೆ, ಗುರುಗುಣಗಾನ ನಡೆಯಲಿದೆ. 12ರಂದು ಸಂಜೆ 5 ಗಂಟೆಗೆ ದೇವಸ್ಥಾನದಿಂದ ನಗರ ಭಜನೆ ಪ್ರಾರಂಭಗೊಂಡು ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಜಗದಾಂಬ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ದೇವಸ್ಥಾನಕ್ಕೆ ತಲುಪಲಿದೆ. ರಾತ್ರಿ ದೇವರಿಗೆ ವಿಶೇಷ ರಂಗಪೂಜೆ ಹಾಗೂ ಮಹಾಪೂಜೆ ನಡೆಯಲಿದೆ.
13ರಂದು ಮಂಗಳಾಚರಣೆ, ದೀಪ ವಿಸರ್ಜನೆಯೊಂದಿಗೆ ಭಜನಾ ಸಪ್ತಾಹ ಸವಾಪನಗೊಳ್ಳಲಿದೆ. ಸಂಜೆ ಮರುಭಜನೆ, ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದೆ. ಭಜನಾ ಸಪ್ತಾಹದ ಎಲ್ಲ ದಿನ ಮುಂಜಾನೆ 5 ಗಂಟೆಗೆ ದೇವರಿಗೆ ಕಾಕಡಾರತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 11 ಗಂಟೆಗೆ ಪೂಜೆ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.