

ಕುಂದಾಪುರ: ಕನ್ನಡ ಸಾಹಿತ್ಯಕ್ಕೆ ಶ್ರೀಮಂತವಾದ ಪರಂಪರೆ ಇದೆ. ವಿದ್ಯಾರ್ಥಿಗಳು ಕಲಿಕಾ ಸಂದರ್ಭದಲ್ಲಿ ತಮ್ಮ ದೇಶದ ಸಂಸ್ಕೃತಿ ಅನಾವರಣಗೊಳಿಸುವ ಭಾಷೆ ಮತ್ತು ಸಾಹಿತ್ಯದ ಬೇರೆ ಬೇರೆ ರೂಪಗಳನ್ನು ಅಭ್ಯಸಿಸಬೇಕು. ತನ್ಮೂಲಕ ನಮ್ಮ ದೇಶೀ ಸಾಹಿತ್ಯ ಪರಂಪರೆಯನ್ನು ಮುಂದಿನ ತಲೆವಾರಿಗೂ ದಾಟಿಸಬೇಕು ಎಂದು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಚೇರ್ಮನ್ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕಿನ ವಕ್ವಾಡಿಯ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕಾವ್ಯ ಕಮ್ಮಟ ಹಾಗೂ ಹೊತ್ತಗೆ ಓದು ವಿಮರ್ಶೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯಲ್ಲಾಪುರ ವಿಶ್ವ ದರ್ಶನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ದತ್ತಾತ್ರೇಯ ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ, ಒಂದು ಕವಿತೆ ಹುಟ್ಟುವುದೆಂದರೆ ಜೇನುಗೂಡಿನಲ್ಲಿ ತುಪ್ಪ ಕಟ್ಟಿದ ಹಾಗೆ. ಕಾವ್ಯವು ಮಗುವೊಂದು ಧರಿಸಿದ ಹೊಸ ತೊಡುಗೆಯಂತಿರಬೇಕು ಎಂದರು.
ಡಾ.ಹಯವದನ ಉಪಾಧ್ಯ ಮಾತನಾಡಿದರು. ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ವ್ಯಾನೇಜಿಂಗ್ ಟ್ರಸ್ಟಿ ಅನುಪವಾ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಯೋಜಕ ಡಾ.ಕೃಷ್ಣರಾಜ ಕರಬ ಕಮ್ಮಟದ ಉದ್ದೇಶ, ಆಶಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಕವಿತೆಗಳನ್ನು ವಾಚಿಸಿದರು. ಪ್ರಾಂಶುಪಾಲೆ ಡಾ.ರೂಪಾ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಶಿಧರ್ ವಂದಿಸಿದರು. ಕೃತಿಶ್ರೀ ನಿರೂಪಿಸಿದರು.