

ಮಧ್ಯಪ್ರದೇಶ: ಒಂದೇ ಸಿರಿಂಜ್ನಿಂದ 39 ಮಕ್ಕಳಿಗೆ ಕೋವಿಡ್-19 ವ್ಯಾಕ್ಸಿನ್ ನೀಡಿರುವ ಪ್ರಕರಣ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದ್ದು, ಒಂದೇ ಸಿರಿಂಜ್ನಿಂದ ವ್ಯಾಕ್ಸಿನ್ ನೀಡಿದ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಂತಹ ಘಟನೆ ಮಧ್ಯಪ್ರದೇಶದ ಸಾಗರ್ ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದ್ದು, ಪಾಲಕರು ಆತಂಕಕ್ಕೀಡಾಗಿದ್ದಾರೆ. ಕೋವಿಡ್ ಲಸಿಕೆ ಮಹಾ ಅಭಿಯಾನದ ವೇಳೆ ಈ ಘಟನೆ ಸಂಭವಿಸಿದ್ದು, ಆರೋಪಿ ಜಿತೇಂದ್ರ ಅಹಿರ್ವಾರ್ ತಲೆಮರೆಸಿಕೊಂಡಿದ್ದಾನೆ.
ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಒಂದೇ ಸಿರಿಂಜ್ನಿಂದ ಎಲ್ಲ ಮಕ್ಕಳಿಗೂ ಲಸಿಕೆ ಕೊಡುವುದನ್ನ ನೋಡಿ ಸ್ಥಳದಲ್ಲಿದ್ದ ಪಾಲಕರು ಆಕ್ಷೇಪ ವ್ಯಕ್ತಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ 39 ಮಕ್ಕಳಿಗೆ ಒಂದೇ ಸಿರಿಂಜ್ ಬಳಸಿರುವುದು ಗೊತ್ತಾಗಿದೆ. ಪಾಲಕರು ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಬಂದ ಸಾಗರ್ ಇನ್-ಚಾರ್ಜ್ ಕಲೆಕ್ಟರ್ ಕ್ಷಿತಿಜ್ ಸಿಂಘಾಲ್ ಮತ್ತು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಡಿ.ಕೆ. ಗೋಸ್ವಾಮಿ ಅವರು ಪರಿಶೀಲನೆ ನಡೆಸಿದರು. ಆರೋಪಿ ಅಹಿರ್ವಾರ್ ಪರಾರಿಯಾಗಿದ್ದು, ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.
ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, 19 ಮಕ್ಕಳ ವರದಿ ನಾರ್ಮಲ್ ಎಂದು ಬಂದಿದೆ. ಉಳಿದ ಮಕ್ಕಳ ಆರೋಗ್ಯ ತಪಾಸಣಾ ವರದಿ ಬರಬೇಕಿದೆ. ಇನ್ನು ಒಂದೇ ಸಿರಿಂಜ್ನಲ್ಲಿ ಲಸಿಕೆ ಪಡೆದ 39 ಮಕ್ಕಳು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಇವರಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿದ್ದಾರೆ.