ದೇವಿ ಕುಂಭ ಹೊತ್ತ 108 ಪುರುಷರು! ಶಾಪ ವಿಮೋಚನೆಗೆ ಕಾಟೇನಹಳ್ಳಿ ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

Haveri Villagers
Published on

ಹಾವೇರಿ: ಹಳ್ಳಿಗೆ ಅಂಟಿಕೊಂಡಿರುವ ಶಾಪ ವಿಮೋಚನೆಗಾಗಿ, ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಆ ಗ್ರಾಮದ 108 ಯುವಕರು, ಪುರುಷರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಊರ ತುಂಬ ಕುಂಭದ ನೀರು ಚೆಲ್ಲಿ, ರುದ್ರಾಭಿಷೇಕ ಮಾಡಿ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಗ್ರಾಮದೇವತೆಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರು.

ಈ ದೃಶ್ಯಗಳು ಕಂಡಿದ್ದು ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ. ಕಳೆದ ತಿಂಗಳು ಆಲದಕಟ್ಟಿ ಪಟಾಕಿ ದುರಂತದಲ್ಲಿ ಗ್ರಾಮದ ಮೂವರು ಯುವಕರು ದುರ್ಮರಣಕ್ಕೀಡಾಗಿದ್ದರು. ಅದೇ ದಿನ ಮತ್ತೋರ್ವ ವೃದ್ಧೆ ಮೃತಪಟ್ಟಿದ್ದರು. ಇಂತಹ ಅವಘಡಗಳಿಂದ ನಲುಗಿಹೋಗಿದ್ದ ಕಾಟೇನಹಳ್ಳಿಯ ಗ್ರಾಮಸ್ಥರೆಲ್ಲರೂ ಸೇರಿ ಜಾತಿ- ಭೇದ ಮರೆತು ಗ್ರಾಮದೇವತೆಯ ಆರಾಧನೆ ಮಾಡಿದರು.

ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಗ್ರಾಮದೇವತೆಯ ಆರಾಧನೆ, ಮೆರವಣಿಗೆ ಮಾಡಲಾಗುತ್ತದೆ. ಅದೇ ರೀತಿ ಆ.29ರಂದು ಗ್ರಾಮದಲ್ಲಿ ದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಅದೇ ದಿನ ಆಲದಕಟ್ಟಿಯಲ್ಲಿ ಪಟಾಕಿ ದುರಂತ ಸಂಭವಿಸಿ, ಗ್ರಾಮದ ಮೂವರು ಮೃತಪಟ್ಟರು. ಅದೇ ದಿನ ಮತ್ತೋರ್ವ ವೃದ್ಧೆಯೂ ಮೃತಪಟ್ಟಿದ್ದರು. ಆ ದಿನ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿತ್ತು.

ಈ ಘಟನೆಯಿಂದ ಇನ್ನೂ ಹೊರಬಾರದ ಹಿರಿಯರು ಹರಿಹರದ ಸ್ವಾಮೀಜಿಯೊಬ್ಬರ ಸಲಹೆಯಂತೆ ಅ.3ರಂದು ಗ್ರಾಮದಲ್ಲಿ ದೇವಿ ಆರಾಧನೆ, ಪುರುಷರಿಂದ ಕುಂಭ ಮೆರವಣಿಗೆ ಆಯೋಜಿಸಿದ್ದರು. ಗ್ರಾಮದ ಬಸವಣ್ಣ ದೇವಸ್ಥಾನದಿಂದ ಆರಂಭವಾಯಿತು. 108 ವಿವಾಹಿತ ಮತ್ತು ಅವಿವಾಹಿತ ಪುರುಷರು ಹೆಗಲ ಮೇಲೆ ಕುಂಭ ಹೊತ್ತು ಸಾಗಿದರು. ಊರ ತುಂಬಾ ಕುಂಭದ ನೀರು ಚೆಲ್ಲಿದರು. ಊರ ಹೊರಗಿನ ಬೋರ್ಗಲ್ಲಿಗೆ ಅಭಿಷೇಕಗೈದರು. ನಂತರ ದ್ಯಾಮವ್ವನ ಗುಡಿಗೆ ತೆರಳಿ ರುದ್ರಾಭಿಷೇಕ ಮಾಡಿ, ಉಡಿ ತುಂಬುವ ಮೂಲಕ ಪುನೀತರಾದರು.

ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾಟೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ವಾಲೀಕಾರ, ತಾಪಂ ಮಾಜಿ ಸದಸ್ಯ ಅಶೋಕ ಹನುಮಗೇರಿ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ವೀರಭದ್ರಪ್ಪ ಗೋಣೆಮ್ಮನವರ, ಗ್ರಾಮದ ಹಿರಿಯರಾದ ಸೋಮನಗೌಡ್ರ ಪಾಟೀಲ, ಹೊನ್ನಪ್ಪ ಯಲಿಗಾರ, ಹುನುಮಂತಪ್ಪ ಅಂಗರಗಟ್ಟಿ. ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಗ್ರಾಮದಲ್ಲಿ ಪದೇಪದೆ ನೋವಿನ ಸಂಗತಿಗಳು ನಡೆದ ಕಾರಣ ಸ್ವಾಮೀಜಿಯೊಬ್ಬರ ಸಲಹೆಯಂತೆ ಗ್ರಾಮದೇವತೆಗೆ ವಿಶೇಷ ಪೂಜೆ ಮಾಡಲಾಯಿತು. ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿದ್ದ ಹೆಣ್ಣು ಮಕ್ಕಳು ತವರು ಮನೆಗೆ ಬಂದು ದೇವಿಗೆ ಹಣ್ಣು- ಕಾಯಿ ಮಾಡಿಸಿದರು. | ವೀರಭದ್ರಪ್ಪ ಗೋಣೆಮ್ಮನವರ, ಅಧ್ಯಕ್ಷ, ವಿಎಸ್‌ಎಸ್ ಬ್ಯಾಂಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net