

ವಿಜಯವಾಣಿ ಸುದ್ದಿಜಾಲ ಬೈಂದೂರು
ಕುಂದಾಪ್ರ ಕನ್ನಡವೆಂಬುದು ಕನ್ನಡದ ವಿಶಿಷ್ಟ ಭಾಷಾ ಪ್ರಕಾರವಾಗಿದೆ. ಭಾಷೆಯ ಅಭಿಮಾನ ಎಲ್ಲ ಭಾವನೆಗಳನ್ನು ಮೀರಿ ಒಂದುಗೂಡಿಸುವಂತಿದ್ದರೆ ಅದು ವಿಶಿಷ್ಟವಾದ ಅನುಭೂತಿಯೇ ಸರಿ. ಕುಂದಾಪ್ರ ಕನ್ನಡ ಭಾಷೆ ಆಡುಭಾಷೆಯಾಗಿರುವುದರ ಜತೆಗೆ ದಾಖಲೀಕರಣ ಕಾರ್ಯವೂ ಹೆಚ್ಚೆಚ್ಚು ನಡೆಯಲಿ ಎಂದು ಹಿರಿಯ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಶನಿವಾರ ಗಮ್ಮತ್ತ್ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು.
ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಮ್ಮತ್ತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಗಸ್ಟ್ 3ರಂದು ಯಡ್ತರೆ ನೆಲ್ಯಾಡಿ ಬೈಲ್, ಜೆಎನ್‌ಆರ್ ಕಲಾಮಂದಿರದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಬಾರಿ ಇನ್ನಷ್ಟು ಕ್ರೀಡೆ, ಸಾಹಿತ್ತಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಬೇಕಿದೆ ಎಂದರು.
ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಉದ್ಯಮಿ ಎನ್.ದಿವಾಕರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಘಟಕ ಅಧ್ಯಕ್ಷ ಅರುಣ್‌ಕುಮಾರ್ ಶಿರೂರು, ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಸುನೀಲ್ ಬೈಂದೂರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ.ಉಪ್ಪುಂದ ನಿರೂಪಿಸಿದರು.