

ನ್ಯೂಯಾರ್ಕ್: ಇತ್ತೀಚೆಗೆ ಪ್ರಪಂಚದಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಚಾಲಕರ ನಿರ್ಲಕ್ಷ್ಯದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವಾರು ಮಂದಿ ಅನಾಥರಾಗಿ ಉಳಿದಿದ್ದಾರೆ. ಮಿತಿಮೀರಿದ ವೇಗ, ನಿರ್ಲಕ್ಷ್ಯದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಅರಿವಿಲ್ಲದೆ ವಾಹನ ಚಾಲನೆ ಮಾಡುವುದು ಪ್ರತಿನಿತ್ಯ ಅನೇಕ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಲ್ಲಿಯೂ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಜನರು ಸಾವಿಗೀಡಾಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಮತ್ತೊಂದು ದುರಂತ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ. ಮೃತರೆಲ್ಲರು ಒಂದೇ ಕುಟುಂಬದವರು. ಅರವಿಂದ್ ಮಣಿ (45), ಅವರ ಪತ್ನಿ ಪ್ರದೀಪಾ ಅರವಿಂದ್ (40) ಮತ್ತು ಮಗಳು ಆಂಡ್ರಿಲ್ ಅರವಿಂದ್ (17) ಮೃತಪಟ್ಟಿದ್ದಾರೆ. ಮಗ ಆದಿರ್ಯಾನ್ ಅಪಘಾತದಿಂದ ಪಾರಾಗಿದ್ದು, ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಕಳೆದ ಬುಧವಾರ ಬೆಳಗ್ಗೆ 5.45ಕ್ಕೆ ಲಾಂಪಾಸ್ ಕೌಂಟಿಯಲ್ಲಿ ಈ ದುರ್ಘಟನೆ ನಡೆದಿದೆ. ಅರವಿಂದ್ ಮತ್ತು ಅವರ ಪತ್ನಿ ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. 17 ವರ್ಷದ ಆಂಡ್ರಿಲ್, ಪ್ರೌಢಶಾಲೆ ಮುಗಿಸಿದ್ದು, ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕೆ ಪಡೆಯಲು ಪಾಲಕರೊಂದಿಗೆ ಹೋಗುತ್ತಿದ್ದಳು. ಆಕೆ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ಯೋಜಿಸಿದ್ದಳು. ಆದರೆ, ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯ ಅನಾಥವಾಗಿರುವ ಆದಿರ್ಯಾನ್ ಜೀವನಕ್ಕೆ ನೆರವು ನೀಡಲು ಎ ಗೋ ಫಂಡ್ ಮೀ ಪೇಜ್ ಅಭಿಯಾನ ಶುರು ಮಾಡಿದ್ದು, ಈವರೆಗೆ 7 ಲಕ್ಷ ಡಾಲರ್ ಸಂಗ್ರಹವಾಗಿದೆ.
ಅಪಘಾತದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಅಪಘಾತದ ಬಗ್ಗೆ ಮಾತನಾಡಿದ ಪೊಲೀಸರು, ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದಾಗ ಕಾರಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)