ಉತ್ತರಕಾಶಿ ಸುರಂಗ ಕುಸಿತ: ಸ್ಥಳಕ್ಕೆ ಪ್ರಧಾನಿ ಕಾರ್ಯಾಲಯ ತಂಡ- ರಕ್ಷಣಾ ಕಾರ್ಯ ಚುರುಕು

kashi tunel
Published on

ವಾರಣಾಸಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ ಕನಿಷ್ಠ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಪರಿಶೀಲಿಸಲು ಪ್ರಧಾನಿ ಕಾರ್ಯಾಲಯದ ತಂಡವು ಸ್ಥಳಕ್ಕೆ ತಲುಪಿತು.

ಇದನ್ನೂ ಓದಿ: ಉತ್ತರಕಾಶಿ- ಸಿಲ್ಕ್ಯಾರಾ ಸುರಂಗ ಕೊರೆಯುವಿಕೆ ಸ್ಥಗಿತ: ವಾರದಿಂದ ಒಳಗೆ ಸಿಲುಕಿರುವ 40 ಕಾರ್ಮಿಕರ ರಕ್ಷಣೆ ಹೇಗೆ? ಕುಸಿದ ಸುರಂಗದಲ್ಲಿ ಶುಕ್ರವಾರಕ್ಕೆ 24 ಮೀಟರ್‌ಗಳಷ್ಟು ಕೊರೆಯುವಲ್ಲಿ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಸಿಲುಕಿರುವ ಕಾರ್ಮಿಕರನ್ನು ತಲುಪಲು 60 ಮೀಟರ್ (195 ಅಡಿ) ವರೆಗೆ ಕೊರೆಯಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬಂಡೆ ಬಿರುಕು ಬಿಟ್ಟ ಜೋರಾದ ಶಬ್ದ ಕೇಳಿದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಇಂದೋರ್‌ನಿಂದ ಹೊಸ ಯಂತ್ರವು ಬರುತ್ತಿದ್ದು, ಶನಿವಾರ ಮತ್ತೆ ಸುರಂಗ ಕೊರೆವ ಕೆಲಸ ಮಾಡಲಾಗುತ್ತಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಾಲ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಂತರ ಕಾರ್ಯಾಚರಣೆ ಚುರುಕುಗೊಳಿಸುವ ಕುರಿತು ಅಧಿಕಾರುಗಳ ಜತೆ ಚರ್ಚಿಸಿದರು.

ಸಿಕ್ಕಿಬಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲು ಮಾರ್ಗ ಸಿದ್ಧಪಡಿಸಲು ಕೊರೆದ ಮಾರ್ಗದಲ್ಲಿ 4 ಪೈಪ್​ಗಳನ್ನು ಅಳವಡಿಸಿದ್ದು, ಐದನೇ ಪೈಪ್ ಅನ್ನು ಅಳವಡಿಸಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್​ಎಚ್​ಐಡಿಸಿಎಲ್​) ಅಧಿಕಾರಿಗಳು ಮಂಗೇಶ್ ಅವರಿಗೆ ಮಾಹಿತಿ ನೀಡಿದರು.

ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರು ಇಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ, ಪೈಪ್​ಗಳ ಮೂಲಕ ಆಮ್ಲಜನಕ, ಔಷಧಿ, ಆಹಾರ ಮತ್ತು ನೀರಿನಂತಹ ಅಗತ್ಯ ಸರಬರಾಜನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮಾನಸಿಕ ತಜ್ಞರು ಸಹ ಅವರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಎನ್​ಎಚ್​ಐಡಿಸಿಎಲ್ ನ ನಿರ್ದೇಶಕ ಅಂಶು ಮನೀಶ್ ಖಲ್ಖೋ ಖಚಿತಪಡಿಸಿದರು.

ಬ್ಯಾಕಪ್ ಡ್ರಿಲ್ಲಿಂಗ್ ಮೆಷಿನ್: ಈಗ ಕಾರ್ಯನಿರ್ವಹಿಸುತ್ತಿರುವ 25-ಟನ್‌ನ ಅಮೇರಿಕನ್ ನಿರ್ಮಿತ ಆಗರ್ ಯಂತ್ರವನ್ನು ಹೋಲುವ ಸಾಧನಗಳನ್ನು ಇಂದೋರ್‌ನಿಂದ "ಬ್ಯಾಕ್‌ಅಪ್" ಆಗಿ ತರಲಾಗುತ್ತಿದೆ ಆದ್ದರಿಂದ ರಕ್ಷಣಾ ಕಾರ್ಯಾಚರಣೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ರಕ್ಷಣಾ ಕಾರ್ಯಕರ್ತರು 800- ಮತ್ತು 900- ಮಿಲಿಮೀಟರ್ ವ್ಯಾಸದ ಪೈಪ್‌ಗಳನ್ನು ಸೇರಿಸಲು 60 ಮೀಟರ್‌ಗಳವರೆಗೆ ಕೊರೆಯಬೇಕು. ಒಂದರ ನಂತರ ಒಂದರಂತೆ - ದೈತ್ಯ ಡ್ರಿಲ್‌ನ ಸಹಾಯದಿಂದ ಸಿಲುಕಿರುವ ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ರಚಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net