ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಕ್ರೀಡೆ-ಪಂದ್ಯಾಟಗಳನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಿರುವುದು ಶಾಲಾಭಿವೃದ್ಧಿ ಸಮಿತಿಯ ಹಾಗೂ ಶಿಕ್ಷಕರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಪುತ್ತೂರಿನ ಶ್ರೀರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ, ಪುತ್ತೂರು ಗ್ರಾಮಾಂತರ ವಲಯಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಪಂದ್ಯಾಟ ಉದ್ಘಾಟಿಸಿದರು. ಶಾಲಾ ಕಾರ್ಯಾಧ್ಯಕ್ಷ ಶ್ರೀರಾಮ ಪಕ್ಕಳ ಅಧ್ಯಕ್ಷತೆ ವಹಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ವೆಂಕಪ್ಪ ನಾಯ್ಕ, ಇಬ್ರಾಹಿಂ ಪಳ್ಳತ್ತೂರು, ಪ್ರಮುಖರಾದ ಮಂಜುನಾಥ ರೈ ಸಾಂತ್ಯ, ಮಹಾಬಲ ರೈ, ಸೂಫಿ ಬಂಟಡ್ಕ, ವಿಕ್ರಮ್ ರೈ ಸಾಂತ್ಯ, ರಾಮಕೃಷ್ಣ ಪಡುಮಲೆ, ಅಬ್ದುಲ್ ರಹಿಮಾನ್ ಹಾಜಿ, ಅಬ್ದುಲ್ ಖಾದರ್, ಫೌಝಿಯಾ ಅತಿಥಿಗಳಾಗಿದ್ದರು.
ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿದರು. ಶಿಕ್ಷಕರಾದ ಪುರುಷೋತ್ತಮ, ರಮಿತಾ, ದಮಯಂತಿ, ಮೀನಾಕ್ಷಿ, ಮೋನಿಷಾ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ವಂದಿಸಿದರು. ಶಿಕ್ಷಕಿ ಇಂದಿರಾ ಎ. ಕಾರ್ಯಕ್ರಮ ನಿರೂಪಿಸಿದರು.
ಗಜಾನನ, ನೆಟ್ಟಣಿಗೆ ಮುಡ್ನೂರು ಪ್ರಥಮ
ಬಾಲಕರ ವಿಭಾಗದಲ್ಲಿ ಹನುಮಗಿರಿಯ ಗಜಾನನ ವಿದ್ಯಾಸಂಸ್ಥೆ ಪ್ರಥಮ, ಇರ್ದೆ-ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಆತಿಥೇಯ ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆ ಪ್ರಥಮ ಹಾಗೂ ಕೊಳ್ತಿಗೆ ಪೆರ್ಲಂಪಾಡಿಯ ಷಣ್ಮುಖ ದೇವ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಾಬಲ ರೈ ಕರ್ನೂರು ಬಹುಮಾನ ವಿತರಿಸಿದರು. ಅಬ್ದುಲ್ ಖಾದರ್, ರಾಜೇಶ್ ಪಂಚೋಡಿ, ನಾರಾಯಣ ಮೇನಾಲ, ವೆಂಕಪ್ಪ ನಾಯ್ಕ ಉಪಸ್ಥಿತರಿದ್ದರು.