

ಬೆಂಗಳೂರು: 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 40,061 ವಿದ್ಯಾರ್ಥಿಗಳು ಕೃಪಾಂಕದಿಂದ ಪಾಸ್ ಆಗಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 8,53,436 ವಿದ್ಯಾರ್ಥಿಗಳ ಪೈಕಿ 40,061 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. 35,931 ಮಂದಿಗೆ ಒಂದು ವಿಷಯಕ್ಕೆ, 3,940 ವಿದ್ಯಾರ್ಥಿಗಳಿಗೆ ಎರಡು ವಿಷಯಗಳಿಗೆ ಹಾಗೂ 190 ವಿದ್ಯಾರ್ಥಿಗಳಿಗೆ ಮೂರು ವಿಷಯಗಳಿಗೆ ಕೃಪಾಂಕ ನೀಡಲಾಗಿದೆ. ಕನಿಷ್ಠ 175 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಅವಶ್ಯವಿರುವ ಶೇ.10ರಷ್ಟು ಅಂಕಗಳನ್ನು ಕೃಪಾಂಕವಾಗಿ ನೀಡಲಾಗಿದೆ. 1 ಅಂಕದಿಂದ ಗರಿಷ್ಠ 26 ಅಂಕದವರೆಗೂ ಕೃಪಾಂಕಗಳನ್ನು ನೀಡಲಾಗಿದೆ ಎಂದು ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.