

ದೆಹಲಿ: ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹಿರಿಯ ಪುತ್ರ ಆಶೀಶ್(34) ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಪತ್ರಕರ್ತರಾಗಿದ್ದ ಆಶೀಶ್ಗೆ ಎರಡು ವಾರದ ಹಿಂದೆ ಕರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇವರು ಬದುಕಿದ್ದರೆ ಜುಲೈ 9ಕ್ಕೆ 35ನೇ ವರ್ಷ ಬರ್ತ್ ಡೇ ಸಂಭ್ರಮದಲ್ಲಿರಬೇಕಿತ್ತು. ಚೆನ್ನೈನ ಏಷಿಯನ್ ಜರ್ನಲಿಸಂ ಕಾಲೇಜಿನಲ್ಲಿ ಆಶೀಶ್ ವಿದ್ಯಾಭ್ಯಾಸ ಮಾಡಿದ್ದರು.
ಪುತ್ರನ ಸಾವಿನ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಸೀತಾರಾಮ್ ಯೆಚೂರಿ, ಕೋವಿಡ್ನಿಂದ ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ಇಂದು ಬೆಳಗ್ಗೆ ಕಳೆದುಕೊಂಡೆ. ನಮಗೆ ಭರವಸೆ ನೀಡಿದ ಹಾಗೂ ಮಗನಿಗೆ ಚಿಕಿತ್ಸೆ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳು ಎಂದಿದ್ದಾರೆ.
ಆಶೀಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. "ಸೀತಾರಾಮ್ ಯೆಚೂರಿ ಜೀ ಮತ್ತು ಅವರ ಕುಟುಂಬಕ್ಕೆ ಆಶೀಶ್ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.