

ಬೆಳಗಾವಿ: ಇಂದು ಬೆಳ್ಳಂಬೆಳಗ್ಗೆ ಖಾಸಗಿ ಶಾಲಾ ಬಸ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಥಣಿ ಪಟ್ಟಣ ಹೊರವಲಯದ ಮೀರಜ್ ರಸ್ತೆಯಲ್ಲಿ ಸಂಭವಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ನಲ್ಲಿ 20 ಮಕ್ಕಳು ಸಂಚರಿಸುತ್ತಿದ್ದರು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಬಸ್ ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ವಾಹನದ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಥಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.