

ಬೆಂಗಳೂರು: ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. ಕುಡುಕನ ತರ ಮಾತಾಡ್ತಾರೆ. ಡಿಕೆಶಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ವೇಳೆಯೇ ಕಾಂಗ್ರೆಸ್ ನಾಯಕರಾದ ಸಲೀಂ ಮತ್ತು ಉಗ್ರಪ್ಪ ನಡೆಸಿದ್ದ ಸಂಭಾಷಣೆ ಬಹಿರಂಗವಾಗುತ್ತಿದ್ದಂತೆ ಸಲೀಂಗೆ ಗೇಟ್ ಪಾಸ್ ನೀಡಲಾಗಿದೆ. ಶಿಸ್ತುಪಾಲನಾ ಸಮಿತಿಯಿಂದ ಉಗ್ರಪ್ಪಗೆ ನೋಟಿಸ್ ಜಾರಿ ಮಾಡಲಾಗಿದೆ.
ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಸಲೀಂ ಅವರನ್ನ ಅಮಾನತು ಮಾಡಲಾಗಿದೆ. ಉಗ್ರಪ್ಪ ಮತ್ತು ಸಲೀಂ ಇಬ್ಬರನ್ನೂ ಪಕ್ಷದಿಂದಲೇ ವಜಾ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಂದ ಒತ್ತಡ ಹೆಚ್ಚಾಗುತ್ತಿದೆ. ಇವರಿಬ್ಬರ ಸಂಭಾಷಣೆ ಡಿಕೆಶಿ ಇಮೇಜ್ಗೆ ಭಾರೀ ಡ್ಯಾಮೇಜ್ ತಂದೊಡ್ಡಿದ್ದು, ಕಾಂಗ್ರೆಸ್ಗೆ ಇರಿಸುಮುರಿಸು ಉಂಟಾಗಿದೆ. ಸಲೀಂರ ಹೇಳಿಕೆಯನ್ನ ಪ್ರಸ್ತಾಪಿಸಿ ಬಿಜೆಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಡಿಕೆಶಿ ವಿರುದ್ಧದ ಹೇಳಿಕೆ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಉಗ್ರಪ್ಪ, ಕೆಪಿಸಿಸಿ ಮಾಧ್ಯಮ ಸಂಯೋಜಕ ಎಡವಿರೋದು ನಿಜ. ಪಕ್ಷಕ್ಕೆ ಡ್ಯಾಮೇಜ್ ಆಗುವ ಹಿನ್ನೆಲೆಯಲ್ಲಿ ಅವರಿಂದ ಆ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಅವರಿಂದ ವಿವರಣೆ ಪಡೆಯಲಿದ್ದಾರೆ ಎಂದರು.