

ಕಡಬ(ದಕ್ಷಿಣ ಕನ್ನಡ): ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲ್ಲೆ ಧ್ವಜಾರೋಹಣ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕರೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಕಡಬದ ಹಳೇಸ್ಟೇಷನ್ ಅಮೃತ ಸರೋವರದ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ನಿವೃತ್ತ ಸೈನಿಕ ಗಂಗಾಧರ ಗೌಡ ಮೃತರು. ಇಲ್ಲಿನ ಕುಟ್ರುಪಾಡಿ ಗ್ರಾಮ ಪಂಚಾಯಿತಿ ವತಿಯಿಂದ ಹಳೇಸ್ಟೇಷನ್ ಅಮೃತ ಸರೋವರದ ಬಳಿ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಹೊಸಮಠ ಸಿ.ಎ.ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎನ್.ಕರುಣಾಕರ ಗೋಗಟೆ ಧ್ವಜಾರೋಹಣ ಮಾಡಲು ಸಿದ್ಧತೆ ಮಾಡುತ್ತಿದ್ದಾಗ ಅವರಿಗೆ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಧ್ವಜಾರೋಹಣ ನಡೆಸುವ ವೇಳೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾಗಮಧ್ಯೆ ಕೊನೆಯುಸಿರೆಳೆದರು.