ಅಪ್ಪು ಆಸೆ ಈಡೇರಿಸಲು ಮುಂದಾದ ರಾಜ್​ ಕುಟುಂಬ: ಮ್ಯೂಸಿಯಂ ಆಗಲಿದೆ ಮನೆ, ಅಭಿಮಾನಿಗಳ ವೀಕ್ಷಣೆಗೂ ಅವಕಾಶ

1201160
Published on

ಚಾಮರಾನಗರ: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಅಗಲಿಕೆ ನೋವು ಇನ್ನೂ ಕಾಡುತ್ತಲೇ ಇದೆ. ಮಹತ್ತರ ಯೋಜನೆಗಳನ್ನು ಹಾಕಿಕೊಂಡಿದ್ದ ಅಪ್ಪು, ಹೇಗೆಲ್ಲ ಸಾಕಾರ ಮಾಡಬೇಕು ಎಂದು ಕನಸು ಕಂಡಿದ್ದರು. ಅವರ ಕನಸು ನನಸಾಗುವ ಮುನ್ನವೇ ಇಹಲೋಕ ತ್ಯಜಿಸಿಬಿಟ್ಟರು. ಇಂದಿಗೂ ಅಪ್ಪುಗಾಗಿ ಕರುನಾಡು ಮಿಡಿಯುತ್ತಲೇ ಇದೆ. ಅವರು ನಡೆದ ಸಮಾಜಮುಖಿ ನಡೆಯನ್ನೇ ಸಹಸ್ರಾರು ಅಭಿಮಾನಿಗಳು ಹೆಜ್ಜೆ ಇಡುತ್ತಿದ್ದಾರೆ. ದೊಡ್ಮನೆ ಕುಟುಂಬಸ್ಥರೂ ಅಪ್ಪು ಆಸೆಗಳನ್ನ ಈಡೇರಿಸಲು ಮುಂದಾಗಿದ್ದಾರೆ.

ಇತ್ತೀಚಿಗಷ್ಟೇ ಗಂಧದಗುಡಿ ಟೀಸರ್​ ಬಿಡುಗಡೆ ಮಾಡಿದ್ದ ಕುಟುಂಬ, ಇದೀಗ ಡಾ.ರಾಜ್​ಕುಮಾರ್​ ಅವರು ಹುಟ್ಟಿಬೆಳೆದ ಗಾಜನೂರಿನ ಮನೆಗೆ ಕಾಯಕಲ್ಪ ನೀಡುವ ಮೂಲಕ ಅಪ್ಪು ಆಸೆಯನ್ನ ನನಸು ಮಾಡಲು ನಿರ್ಧರಿಸಿದ್ದಾರೆ. ಚಾಮರಾಜನಗರ ಗಡಿಯ ತಾಳವಾಡಿ ಸಮೀಪದ ಗಾಜನೂರಿನ ಡಾ.ರಾಜ್ ಅವರ ಹಳೇ ಮನೆಗೆ ಸಾವಿಗೂ ಮುನ್ನ ಅಂದ್ರೆ ಮೂರು ತಿಂಗಳ ಹಿಂದಷ್ಟೇ ಪುನೀತ್​ ಭೇಟಿ ಕೊಟ್ಟಿದ್ದರು. ಅಪ್ಪ ಆಟವಾಡಿ ಬೆಳೆದ ಹಳೆಯ ಮನೆಯನ್ನು ಉಳಿಸಲು ಗಾಜನೂರಿಗೆ ಮತ್ತೇ ಭೇಟಿ ಕೊಡುವೆ. ಮನೆಯನ್ನು ದುರಸ್ತಿ ಮಾಡಿಸ್ತೀನಿ ಎಂದು ಊರಿನವರಿಗೆ ಮಾತು ಕೊಟ್ಟಿದ್ದರು. ಆದರೆ, ಅಪ್ಪು ಅಕಾಲಿಕ ನಿಧನವಾದರು.

ಇದೀಗ ಅಪ್ಪು ಆಸೆ ಈಡೇರಿಸಲು ರಾಜ್​ ಕುಟುಂಬ ದುರಸ್ತಿ ಕಾರ್ಯ ನಡೆಸುತ್ತಿದ್ದು, ಕೆಲಸ ಮುಗಿದ ನಂತರ ಮನೆ ವೀಕ್ಷಣೆಗೆ ಶಿವಣ್ಣ ಮತ್ತು ರಾಘಣ್ಣ ಬರಲಿದ್ದಾರೆ. ಈ ಮನೆಯಲ್ಲಿ ಡಾ.ರಾಜ್​ ಕುಮಾರ್​ ಮತ್ತು ಪುನೀತ್ ರಾಜ್​ಕುಮಾರ್ ಅವರಿಗೆ ಸಂಬಂಧಿಸಿದ ಫೋಟೋ ಇಟ್ಟು ಮ್ಯೂಸಿಯಂ ಮಾಡಲು ನಿರ್ಧರಿಸಲಾಗಿದೆ. ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತೆ ಎಂದು ಡಾ.ರಾಜ್​ಕುಮಾರ್​ ಅವರ ಸಹೋದರಿಯ ಪುತ್ರ ಗೋಪಾಲ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net