

ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೆಂಗಳೂರಿನ ಶಿವಾಜಿನಗರ ಪೊಲಿಸ್ ಠಾಣೆಯ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ದೀಕ್ಷಿತ್ ಅವರನ್ನ ಬುಧವಾರ ಬೆಳಗ್ಗೆ ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪಿಎಸ್ಐ ದೀಕ್ಷಿತ್ಗೆ, ಬಲಗೈನ ಎರಡು ಮೂಳೆ ಮುರಿದಿರುವ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎಡ ಭಾಗದ ರಿಬ್ಸ್ಗೂ ಹಾನಿ ಉಂಟಾಗಿದೆ. ಶ್ವಾಸನಾಳಕ್ಕೂ ಹಾನಿ ಉಂಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಬಗ್ಗೆ ಶಿವಾಜಿನಗರ ಠಾಣೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಎಸ್ಐ ಅವಿನಾಶ್ ಮತ್ತು ತಂಡ ಖಾಸಗಿ ಇನೋವಾ ಬಾಡಿಗೆಗೆ ಪಡೆದು ಆಂಧ್ರಪ್ರದೇಶಕ್ಕೆ ತೆರಳಿತ್ತು. ಡ್ರಗ್ಸ್ ಪೆಡ್ಲರ್ಗಳ ಜಾಡು ಹಿಡಿದು ಬಂಧನಕ್ಕೆ ಬೆನ್ನತ್ತಿದ್ದರು. ಆದರೆ, ಕಾರಣಾಂತರದಿಂದ ವಾಪಸ್ ಬೆಂಗಳೂರಿಗೆ ಹೊರಟ್ಟಿದ್ದರು. ಭಾನುವಾರ(ಜು.24)ರ ಮುಂಜಾನೆ 3.30ರಲ್ಲಿ ಚಿತ್ತೂರಿನಿಂದ ತಿರುಪತಿಗೆ ತೆರಳುವ ಮಾರ್ಗದಲ್ಲಿ ಪೂತಾಲ್ಲಪಟ್ಟು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ತಡೆಗೋಡೆಗೆ ಗುದ್ದಿ, ಅಂದಾಜು 30 ಅಡಿ ಎತ್ತರಕ್ಕೆ ಹಾರಿ, ಪಕ್ಕದ ರಸ್ತೆಗೆ ಪಲ್ಟಿಯಾಗಿತ್ತು. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಎಸ್ಐ ಅವಿನಾಶ್(29), ಕಾನ್ಸ್ಟೇಬಲ್ ಅನಿಲ್ ಮುಲಿಕ್(26) ಹಾಗೂ ಕಾರು ಚಾಲಕ ಮ್ಯಾಕ್ಸ್ವೆಲ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದರು.
ಪಿಎಸ್ಐ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ(29) ಅವರನ್ನು ಸ್ಥಳೀಯರು ಆಂಬುಲೆನ್ಸ್ನಲ್ಲಿ ಚಿತ್ತೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದೀಕ್ಷಿತ್(28) ಅವರನ್ನ ಸ್ಥಳಾಂತರಿಸಲಾಗಿದೆ. ಕಾನ್ಸ್ಟೇಬಲ್ ಶರಣ ಬಸವ ಅವರಿಗೆ ಮರ್ಮಾಂಗದ ಬಳಿ ಗಾಯವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಗುರುವಾರ ಹಾಸ್ಮ್ಯಾಟ್ ಆಸ್ಪತ್ರೆಗೆ ಆಗಮಿಸಿದ ಗೃಹ ಸಚಿವರು, ದೀಕ್ಷೀತ್ರ ಆರೋಗ್ಯಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದು, ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು. ದೀಕ್ಷೀತ್ ಮತ್ತು ಕುಟುಂಬಕ್ಕೆ ಧೈರ್ಯ ತುಂಬಿದರು.