

ಗ್ವಾಲಿಯರ್: ಸುಮಾರು 15 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು, ಇದೀಗ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ನ ಬೀದಿಯಲ್ಲಿ ಭಿಕ್ಷುಕನಾಗಿ ಅಲೆಯುತ್ತಿದ್ದ ಅವರನ್ನು ಅವರ ಹಳೆಯ ಸಹೋದ್ಯೋಗಿಗಳು ಗುರುತಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೀಶ್ ಮಿಶ್ರಾ ಅವರು 2005ರಲ್ಲಿ ಕಾಣೆಯಾಗಿದ್ದರು. 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಅವರಿಗೆ 2005ರಲ್ಲಿ ಮಾನಸಿಕ ಖಿನ್ನತೆ ಕಾಣಿಸಿಕೊಂಡಿತ್ತು. ಅವರ ಕುಟುಂಬಸ್ಥರು ಅನೇಕ ಸ್ಥಳಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಉಪಯೋಗವಾಗಿರಲಿಲ್ಲ. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಅವರು ಎಲ್ಲರನ್ನು ಬಿಟ್ಟು ದೂರಾಗಿದ್ದರು. ಅಂದಿನಿಂದ ಎಷ್ಟೇ ಹುಡುಕಿದರೂ ಅವರು ಸಿಕ್ಕಿರಲಿಲ್ಲ.
ಅಂದು ಮನೀಶ್ ಅವರ ಸಹೋದ್ಯೋಗಿಗಳಾಗಿದ್ದ ರತ್ನೇಶ್ ಸಿಂಗ್ ತೋಮರ್ ಮತ್ತು ವಿಜಯ್ ಸಿಂಗ್ ಬಹದ್ದೂರ್ ಅವರು ಕಳೆದ ವಾರ ಗ್ವಾಲಿಯರ್ನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ಚಿಂದಿ ಬಟ್ಟೆ ತೊಟ್ಟಿದ್ದ ವ್ಯಕ್ತಿಯೊಬ್ಬ ನಡುಗುತ್ತಾ ಊಟಕ್ಕಾಗಿ ಬೇಡುತ್ತಿರುವುದು ಕಂಡಿದೆ. ಸೀದಾ ಆತನ ಬಳಿ ತೆರಳಿದ ಅವರು, ತಾವು ತೊಟ್ಟಿದ್ದ ಜಾಕೆಟ್ ಅನ್ನು ಬಿಚ್ಚಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ತಿಳಿಸುವಾಗ ಆ ಭಿಕ್ಷುಕ ಇಬ್ಬರದ್ದೂ ಹೆಸರನ್ನಿಟ್ಟೇ ಮಾತನಾಡಿದ್ದಾನೆ. ಭಿಕ್ಷುಕನೊಬ್ಬ ತಮ್ಮ ಹೆಸರನ್ನು ಹೇಳಿದ್ದು ನೋಡಿ ಆಶ್ಚರ್ಯಗೊಂಡ ಅವರು ಸರಿಯಾಗಿ ಗಮನಿಸಿದಾಗ, ಆ ಭಿಕ್ಷುಕ ಕಳೆದು ಹೋಗಿದ್ದ ಮನೀಶ್ ಎನ್ನುವುದು ಗೊತ್ತಾಗಿದೆ.
ಮನೀಶ್ ಅವರನ್ನು ರತ್ನೇಶ್ ಮತ್ತು ವಿಜಯ್ ಅವರು ಎನ್ಜಿಒ ಒಂದಕ್ಕೆ ಸೇರಿಸಿದ್ದಾರೆ. ಮನೀಶ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)